

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಆಶ್ರಯ ನಿವೇಶನ ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಿದ್ದು, ಈ ಆಯ್ಕೆ ಪಟ್ಟಿ ರದ್ದು ಮಾಡಿ ಅರ್ಹರನ್ನು ಪಾರದರ್ಶಕವಾಗಿ ಮರು ಆಯ್ಕೆ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಮುಕ್ತಿಮಂದಿರ ಧರ್ಮಕ್ಷೇತ್ರ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಪ್ರತಿಭಟನಗೆ ಬೆಂಬಲ ಸೂಚಿಸಿ ಮಾತನಾಡಿ, ಬಡವರಿಗೆ ದೊರೆಯಬೇಕಾದ ನಿವೇಶನಗಳು ಉಳ್ಳವರ ಪಾಲಾಗುತ್ತಿರುವುದು ದುರದೃಷ್ಟಕರ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ನಿವೇಶನ ರಹಿತರಿಗೆ ದೊರೆಯಬೇಕಾಗಿರುವುದನ್ನು ತಪ್ಪಿಸಿರುವುದು ನಿಜಕ್ಕೂ ಖಂಡನೀಯ. ಸ್ವಂತ ಸೂರು ಹೊಂದುವ ಬಡವರ ಕೂಗಿಗೆ ಧ್ವನಿಯಾಗುವ, ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡುವ ನ್ಯಾಯಯುತ ಹೋರಾಟಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚತ್ತು ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, 2013-18 ರವರೆಗೆ ನಾನು ಶಾಸಕನಾಗಿದ್ದ ಸಮಯದಲ್ಲಿ ನಿವೇಶನ ರಹಿತ ಗುಡಿಸಲು ವಾಸಿಗಳು, ನಿರ್ಗತಿಕರು, ಬಡವರಿಗೆ ನಿವೇಶನ ಕಲ್ಪಿಸುವ ಸಲುವಾಗಿ ಅಂದಾಜು 60 ಎಕರೆ ಭೂಮಿ ಖರೀದಿ ಮಾಡಿ, 1679 ಬಡವರಿಗೆ ಮನೆ ನೀಡುವ ಉದ್ದೇಶ ಈಡೇರಲಿಲ್ಲ. ಈಗ ಇದರಲ್ಲಿ ರಾಜಕೀಯ ಬೆರೆಸಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿರುವುದು ನೋವಿನ ಸಂಗತಿ ಎಂದರು.
ತಾಪಂ ಮಾಜಿ ಸದಸ್ಯ ಚನ್ನಪ್ಪ ಜಗಲಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ ನಂದೆಣ್ಣವರ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ, ನಾಗರಾಜ ಚಿಂಚಲಿ, ದಾದಾಪೀರ ಮುಚ್ಚಾಲೆ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು. ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ಚಂದ್ರು ಮಾಗಡಿ, ಅಮರೇಶ ತೆಂಬದಮನಿ, ಬಸವರಾಜ ಕಲ್ಲೂರ, ಅಮರಪ್ಪ ಗುಡಗುಂಟಿ, ರಾಜು ಲಿಂಬಿಕಾಯಿ, ನೂರಅಹ್ಮದ್ ಮಕಂದಾರ, ನೀಲಪ್ಪ ಪಡಗೇರಿ, ಮಾಂತೇಶ ಬಸಾಪುರ, ಮೌಲಾಲಿ ಸೌದಾಗರ, ತಿಮ್ಮಣ್ಣ ಕರಿಗಾರ, ಮಲ್ಲೇಶ ಗೊಜಗೊಜಿ, ಮಹೇಶ ಸೂರಣಗಿ, ಇತರರಿದ್ದರು.