ಯರವರ ಕಡೆಗಣನೆ ಆರೋಪ : ಅರೆಬೆತ್ತಲೆ ಧರಣಿಗೆ ನಿರ್ಧಾರ

P.S.MUTHA (2)
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಯರವರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ ಸ್ವತಂತ್ರವಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸಲು ಜಮೀನು ನೀಡುವಂತೆ ಒತ್ತಾಯಿಸಿ ಸ್ವಾತಂತ್ರ್ಯ ದಿನವಾದ ಆ.೧೫ ರಂದು ಜಿಲ್ಲಾ ನ್ಯಾಯಾಲಯದ ಎದುರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದಾಗಿ ಯರವ ಯುವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್.ಮುತ್ತ ತಿಳಿಸಿದ್ದಾರೆ.


ಪತ್ರಿಕಾ ಹೇಳಿಕೆ ನೀಡಿರುವ ಅವರು, ಯರವರಿಗೆ ಬದುಕಲು ಭೂಮಿ ಕೊಡಿ ಎಂದು ೨೦೦೩ ರಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡಿಲ್ಲ. ಅಲ್ಲದೇ, ೨೦೧೫ರ ಆ.೧೫ ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅರೆಬೆತ್ತಲೆ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಂದಿನ ಜಿಲ್ಲಾಡಳಿತ ಯರವರ ಸಮೀಕ್ಷೆ ನಡೆಸಿ ಸುಮಾರು ೧೧ ಸಾವಿರ ಕುಟುಂಬಗಳು ತೋಟದ ಲೈನ್‌ಗಳಲ್ಲಿ ನೆಲೆಸಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಪುನರ್‌ವಸತಿ ಕಲ್ಪಿಸಬೇಕು ಎಂದು ವರದಿ ನೀಡಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.


ಬದುಕು ಕಟ್ಟಿಕೊಳ್ಳಲು ಭೂಮಿ ಕೊಡಿ ಎಂದು ಕೇಳಿದರೆ ಸೆಂಟ್ ಲೆಕ್ಕದಲ್ಲಿ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ ಇದಕ್ಕಾಗಿ ಹಲವು ನಿಯಮಗಳನ್ನು ರೂಪಿಸುತ್ತಿದ್ದಾರೆ. ಇದರಿಂದ ಯರವರು ಭೂಮಿಯಿಂದ ವಂಚಿತರಾಗುತ್ತಿದ್ದಾರೆ ಮತ್ತು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿ ಜಿಲ್ಲಾ ನ್ಯಾಯಾಲಯದ ಎದುರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net