

ಚಿತ್ರದುರ್ಗ: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ವಸತಿ ಸಚಿವ ಸೋಮಣ್ಣ,ಕಾರ್ಮಿಕ ಸಚಿವ ಶಿವ ರಾಮ್ ಹೆಬ್ಬಾರ್ ಕಬಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿ ಕರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಸಾರಿಗೆ ಇಲಾಖೆಯಿಂದ ಉಚಿತ ಪ್ರಯಾಣದ ಬಸ್‌ಪಾಸ್ ವಿತರಿಸುತ್ತೇವೆಂದು ಮಂಡಳಿ ಹಣದಲ್ಲಿ ಒಬ್ಬರಿಗೆ ತಿಂಗಳೊಂದಕ್ಕೆ ಒಂದು 1400 ರೂ.ಖರ್ಚು ಮಾಡುವುದನ್ನು ತಡೆ ಹಿಡಿಯ ಬೇಕೆಂದು ಆಗ್ರಹಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿಗೆ 2019-20ನೇ ಸಾಲಿನಲ್ಲಿ 5129 ಫಲಾನುಭವಿಗಳಿಗೆಂದು ಮಂಜೂರು ಮಾಡಿರುವ 76 ಕೋಟಿ ರೂ.ಖರ್ಚಿನ ವಿವರವನ್ನು ಮಂಡಳಿ ಇಲ್ಲಿಯವರೆಗೂ ಪಡೆದಿಲ್ಲ. ಆದರೆ 2021-22ರಲ್ಲಿ ಮತ್ತೆ ಕೊಳಚೆ ನಿರ್ಮೂಲನಾ ಮಂಡಳಿಗೆ 433 ಕೋಟಿ ರೂ. ಮಂಜೂರು ಮಾಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿದರು. ಕಾರ್ಮಿಕರಿಗೆ ನೀಡಿರುವ ಕಿಟ್‌ಗಳ ವಿತರಣೆ ಕುರಿತಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದರು. ಎಐಟಿಯುಸಿ ಚಳ್ಳಕೆರೆ ತಾಲೂಕು ಅಧ್ಯಕ್ಷ ದೊಡ್ಡುಳ್ಳಾರ್ತಿ ಕರಿಯಣ್ಣ ಮಾತನಾಡಿ, ಮಂಡಳಿಯ ಅವೈಜ್ಞಾನಿಕ ತೀರ್ಮಾನಗಳಿಂದಾಗಿ ನೈಜ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ,ಜಾಫರ್‌ಷರೀಫ್,ಸತ್ಯಕೀರ್ತಿ,ಎನ್.ಸಿ.ಕುಮಾರಸ್ವಾಮಿ,ಅಮೀನಾ ಭಿ,ಎಂ.ಡಿ.ಷಫಿ,ಕೆ.ಜನಾರ್ಧನ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.