

ಕಡೂರು: ಅಭಿವೃದ್ಧಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಕೆರೆಯ ಮಣ್ಣನ್ನು ಗುತ್ತಿಗೆದಾರರು ಲೂಟಿ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ನೆಪದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಕಡೂರುಹಳ್ಳಿಯ ಕೆರೆ ಮಣ್ಣು ತೆಗೆಯಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಲಾಗಿದೆ ಎಂದು ಕಡೂರಹಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೆಚ್ಚು ಮಣ್ಣು ತೆಗೆದ ಆರೋಪ:
ಪ್ರಾರಂಭದಲ್ಲಿ ಗ್ರಾಮಸ್ಥರು 4 ರಿಂದ 5 ಅಡಿಯಲ್ಲಿ ಮಣ್ಣು ತೆಗೆಯಲು ಒಪ್ಪಿಗೆ ನೀಡಿದ್ದರು. ಈಗ 20 ಅಡಿವರೆಗೂ ಕೆರೆಯ ಮಣ್ಣು ತೆಗೆಯಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಕೆರೆಯಲ್ಲಿ ನೀರನ್ನು ಸಂಗ್ರಹಿಸಲು ಕಷ್ಟ ಸಾಧ್ಯವಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.
ಕೆರೆ ಸಂರಕ್ಷಣಾ ಸಮಿತಿ ಒಪ್ಪಿಗೆ ಪಡೆಯದೆ ಕೆರೆಗಳಿಗೆ ಹಾನಿ ಮಾಡಬಾರದು ಎಂಬ ಆದೇಶವಿದ್ದರೂ ನಿಯಮಬಾಹಿರವಾಗಿ ಮಣ್ಣು ತೆಗೆಯಲಾಗಿದೆ. ಇದಕ್ಕೆ ಪೊಲೀಸರು, ಕೆರೆ ಪ್ರದೇಶದ ಜಿಪಂ ವ್ಯಾಪ್ತಿಯ ಅಧಿಕಾರಿಗಳು ಗುತ್ತಿಗೆದಾರರಿಗೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನೈಸರ್ಗಿಕ ಸಂಪತ್ತು ಲೂಟಿಯಾಗಬಾರದು. ಡಿಸಿ ಸ್ಥಳಕ್ಕೆ ಭೇಟಿ ನೀಡಿ ಮಣ್ಣು ತೆಗೆಸುವ ಕಾರ್ಯ ಸ್ಥಗಿತಗೊಳಿಸಿ ಕೆರೆ ಸಂರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೆರೆ ಸಂರಕ್ಷಣಾ ಸಮಿತಿ ಮೌನ:
ಗ್ರಾಮದ ಮುಖಂಡ ಗಂಗಾಧರಪ್ಪ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು ನಿಯಮಬಾಹಿರವಾಗಿ ಕೆರೆ ಮಣ್ಣು ತೆಗೆಯುತ್ತಿದ್ದರೂ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಸಮಿತಿ ಮೌನ ವಹಿಸಿದೆ. ಕೆರೆ ಬಳಕೆದಾರರ ಸಂಘದಿಂದ ಡಿಸಿ, ಸಿಇಒ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮಣ್ಣು ತೆಗೆಯುವುದನ್ನು ಮುಂದುವರಿಸಿದರೆ ಗ್ರಾಮಸ್ಥರು ಒಗ್ಗಟ್ಟಾಗಿ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಶಿವಾಲಯ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಶಿವಪ್ರಸಾದ್, ಕೆ.ಸಿ.ಪ್ರಶಾಂತ್, ಶೇಖರಪ್ಪ, ರಾಜಣ್ಣ, ಮಲ್ಲಿಕಾರ್ಜುನ್, ಶಿವರುದ್ರಪ್ಪ, ಕಂಸಾಗರ ತ್ಯಾಗರಾಜ್, ಲೋಕೇಶ್ ಇತರರಿದ್ದರು.