

ಬೆಂಗಳೂರು: ರಾಜಧಾನಿಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣಾ ಕಾರ್ಯದಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದ್ದು, ಇದರಿಂದ ಸ್ಥಳೀಯ ಲೇಔಟ್ ಪ್ರದೇಶದಲ್ಲಿ ಜನರಿಗೆ ಸಮಸ್ಯೆ ಎದುರಾಗಲಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ದಸರಾ ಮುನ್ನ ದಿನ ಪ್ರಕಟಿಸಿರುವ ಕರಡು ವಾರ್ಡ್ ಅಧಿಸೂಚನೆಯಲ್ಲಿ ಹಲವು ತಪ್ಪುಗಳು ನುಸುಳಿವೆ. ವಾರ್ಡ್‌ಗಳ ಪ್ರದೇಶವನ್ನು ಗುರುತಿಸುವಾಗ ನಿಖರವಾಗಿ ನಮೂದಿಸದೆ ಅವುಗಳನ್ನು ಬೇರೆ ಬೇರೆ ವಾರ್ಡ್‌ಗಳಿಗೆ ಸೇರಿಸಲಾಗಿದೆ. ಇದರಿಂದ ಒಂದೇ ಬಡಾವಣೆಯ ಜನರು ಬೇರೆ ಬೇರೆ ವಾರ್ಡ್‌ಗಳಿಗೆ ಸೇರಲಿದ್ದು, ಮತದಾನದ ವೇಳೆ ಗೊಂದಲ ಏರ್ಪಡುವ ಸಾಧ್ಯತೆ ಇದೆ. ಇದೆ. ಮುಖ್ಯವಾಗಿ ವಾರ್ಡ್ ಗಡಿಯನ್ನು ಗುರುತಿಸುವಾಗ ವೈಜ್ಞಾನಿಕವಾಗಿ ರೂಪಿಸದೆ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕೆಗೆ ಲಂಬಿಸಲಾಗಿದೆ. ಇದರಿಂದ ಬೇರೆ ಬೇರೆ ಬಡಾವಣೆಗಳ ಪ್ರದೇಶವನ್ನು ವಾರ್ಡ್ ವಿಂಗಡಿಸಿದರೆ ಸ್ಥಳೀಯರ ಅಸ್ಮಿತೆಗೆ ಧಕ್ಕೆ ತರಲಿದೆ ಎಂಬ ಆರೋಪಗಳು ಕೇಳಿಬಂದಿವೆ.
ಉತ್ತರ ಪಾಲಿಕೆಯ ಆರ್.ಟಿ.ನಗರ (46) ಹಾಗೂ ಬಾಲಗಂಗಾಧರ್ (47) ವಾರ್ಡ್‌ಗಳನ್ನು ಇಂಗ್ಲಿಷ್‌ನ ‘ಎಲ್’ ಅಕ್ಷರದ ರೀತಿ ವಿಂಗಡಿಸಲಾಗಿದೆ. ಇವು ಅರ್ಧ ಕಿ.ಮೀ. ಅಗಲಕ್ಕಿಂತ ಕಡಿಮೆ ವಿಸ್ತೀಣದೊಂದಿಗೆ 2 ಕಿ.ಮೀ. ಉತ್ತರ-ದಕ್ಷಿಣ ದಿಕ್ಕಿಗೆ ಹಿಗ್ಗಿಸಲಾಗಿದೆ. ಈ ವಾರ್ಡ್‌ಗಳ ಜನರು ಬೇರೆ ಬೇರೆ ಪ್ರದೇಶಗಳಲ್ಲಿದ್ದರೂ, ಸನಿಹ ಪ್ರದೇಶವನ್ನು ಸೀಮಿತಿಗೊಳಿಸಿ ವಾರ್ಡ್ ರಚಿಸಿಲ್ಲ. ಇದೇ ರೀತಿ ಎಚ್‌ಎಂಟಿ (31) ವಾರ್ಡ್‌ನ್ನು ಜಾಲಹಳ್ಳಿ (29) ವಾರ್ಡ್ ಸುತ್ತಲೂ ಬರುವ ರೀತಿ ರಚಿಸಲಾಗಿದೆ. ಇದು ಈ ಎರಡೂ ವಾರ್ಡ್ ಜನರು ಸಮಸ್ಯೆಗೆ ಒಳಗಾಗುವವರಿದ್ದಾರೆ. ಇಂತಹ ತಪ್ಪುಗಳನ್ನು ಸರಿಪಡಿಸದಿದ್ದರೆ ಚುನಾವಣೆ ವೇಳೆ ಮತದಾರರು ಅನಗತ್ಯ ಸಮಸ್ಯೆ ಹಾಗೂ ಅಲೆದಾಟ ಮಾಡಬೇಕಾಗುತ್ತದೆ ಎಂದು ಪ್ರತಿಪಕ್ಷ ಮುಖಂಡರು ಸಲಹೆ ನೀಡಿದ್ದಾರೆ.
ಆಡಳಿತ ಪಕ್ಷದ ಅನುಕೂಲಕ್ಕಾಗಿ ವಿಂಗಡಣೆ?:
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಸಹಜವಾಗಿಯೇ ವಾರ್ಡ್ ವಿಂಗಡಣೆಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲವಾಗುವ ರೀತಿ ವಾರ್ಡ್‌ಗಳನ್ನು ರಚಿಸಲಾಗಿದೆ. ಜತೆಗೆ ಆಯಾ ಪಾಲಿಕೆಗಳ ಪ್ರಭಾವಿ ಮುಖಂಡರಿಗೆ ಚುನಾವಣೆ ಗೆಲ್ಲಲು ಸುಲಭವಾಗಲು ಈ ರೀತಿ ವಿಂಗಡಣಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ಆಯೋಗವು ವಾರ್ಡ್‌ಗಳ ಗಡಿ ಗುರುತಿಸಲು ಖಾಸಗಿ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿದ್ದು, ಆ ವೇಳೆ ರಾಜಕೀಯ ಪ್ರಭಾವಿಗಳು ಪ್ರಭಾವ ಬೀರಿದ್ದಾರೆ ಎಂದು ಕೆಲ ಮಾಜಿ ಕಾರ್ಪೊರೇಟರ್‌ಗಳು ಟೀಕಿಸಿದ್ದಾರೆ.
ನಕ್ಷೆ ಪ್ರಕಟ:
ವಾರ್ಡ್ ವಿಂಗಡಣೆಯ ಅಧಿಸೂಚನೆ ಬಳಿಕ ಆಯಾ ಪಾಲಿಕೆವಾರು ಹೊಸ ವಾರ್ಡ್‌ಗಳ ನಕ್ಷೆಯನ್ನು ಬಿಡುಗೆ ಮಾಡಲಾಗಿದೆ. ಐದೂ ಪಾಲಿಕೆಗಳಲ್ಲಿರುವ ಆಯಾ ವಿಧಾನಸಭಾ ಕ್ಷೇತ್ರವಾರು ವಾರ್ಡ್‌ಗಳಿಗೆ ಸಂಖ್ಯೆ ನಮೂದಿಸಿ ಪ್ರಕಟಿಸಲಾಗಿದೆ. ದಾಸರಹಳ್ಳಿ, ರಾಜರಾಜೇಶ್ವರಿನಗರ, ಯಶವಂತಪುರ, ಪದ್ಮನಾಭನಗರ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಪ್ರದೇಶವು ಒಂದಕ್ಕಿಂತ ಹೆಚ್ಚು ಪಾಲಿಕೆಗೆ ಸೇರ್ಪಡೆಯಾಗಿವೆ. ಇವುಗಳನ್ನು ಆಯಾ ಪಾಲಿಕೆಗಳ ಅನುಗುಣವಾಗಿಯೇ ಆಯೋಗವು ನಕ್ಷೆ ಸಮೇತ ಪ್ರಕಟಿಸಲಾಗಿದೆ.
ಜನಸಂಖ್ಯೆ ಮಾಹಿತಿ ಇಲ್ಲ:
ವಾರ್ಡ್ ವಿಂಗಡಣೆ ವೇಳೆ 2011ರ ಜನಗಣತಿ ಆಧರಿಸಿ ಜನಸಂಖ್ಯೆಯನ್ನು ಪರಿಗಣಿಸಲಾಗಿದೆ. ಜತೆಗೆ 2023ರ ಚುನಾವಣೆ ವೇಳೆ ಇದ್ದ ಅಂದಾಜು ಜನಸಂಖ್ಯೆಯನ್ನೂ ಪರಿಗಣಿಸಲಾಗಿದೆ. ಇದರಿಂದ ವಾರ್ಡ್‌ಗಳಲ್ಲಿ 30-40 ಸಾವಿರ ಜನಸಂಖ್ಯೆ ಇದರಲಿವೆ. ಆಯಾ ಪಾಲಿಕೆಗಳ ಗಡಿಯಲ್ಲಿರುವ ದೊಡ್ಡ ವಾರ್ಡ್‌ಗಳಲ್ಲಿ ಮಾತ್ರ ಸರಾಸರಿ ಜನಸಂಖ್ಯೆ ಮಿತಿ ದಾಟಿದೆ. ಆದರೂ, ವಾರ್ಡ್ ನಕ್ಷೆ ಜತೆ ಜನಸಂಖ್ಯೆಯನ್ನು ನಮೂದಿಸಿಲ್ಲ. ಇದರಿಂದ ಆಯಾ ವಾರ್ಡ್‌ಗಳ ಗಡಿಗಳು ಸ್ವಲ್ಪ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.