ಬಳ್ಳಾರಿ : ಜಿಲ್ಲೆಯ ಆರಾದ್ಯ ದೈವ ಕನಕದುರ್ಗಮ್ಮ ದೇವಿಗೆ ಭಕ್ತರು ಭಕ್ತಿಯಿಂದ ಅರ್ಪಿಸಿರುವ ಸೀರೆ, ಬೆಳ್ಳಿ ಅಭರಣ ಹಾಗೂ ಉಡಿಹಕ್ಕಿ ಸಾಮಗ್ರಿ ಕಳವು ಹಾಗೂ ಜವಾಬ್ದಾರಿಯುತ ಕಾರ್ಯ ದುರ್ಬಳಕೆ ಆರೋಪಿಸಿ ದೇವಸ್ಥಾನ ಇಒ ಹನುಮಂತಪ್ಪ ದೇವಸ್ಥಾನದ ನಾಲ್ವರು ಅರ್ಚಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ದೇವಸ್ಥಾನದ ಅರ್ಚಕರಾದ ರಾಮಾಂಜಿನಯ್ಯಲು, ಲಕ್ಷ್ಮೀದೇವಿ, ಭಾಗ್ಯಮ್ಮ ಹಾಗೂ ಗಾದೆಪ್ಪ ಅವರಿಗೆ ಸೇರಿ ನಾಲ್ವ ರಿಗೆ ನೋಟಿಸ್ ನೀಡಲಾಗಿದೆ. ಹಲವು ದಿನಗಳಿಂದ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸದೆ ಅರ್ಚಕ ಸ್ಥಾನ ದುರ್ಬಳಕೆ ಮಾಡಿಕೊಂಡು ದೇವಸ್ಥಾನದ ಹಣ, ಸೀರೆ, ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ಯುತ್ತಿದ್ದಾರೆ. ಅಲ್ಲದೆ, ಇದಕ್ಕೆ ಪ್ರಶ್ನಿಸಿದ ಇಒ, ಗೃಹರಕ್ಷಕ ಹಾಗೂ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿರುವ ವೀಡಿಯೊ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಂದಾಜು 10 ಲಕ್ಷ ರೂ. ಬೆಲೆಬಾಳು ಬೆಳ್ಳಿ ಸಾಮಗ್ರಿ, ಉಡಿಅಕ್ಕಿ ಸೀರೆ, ಎಲೆಚಟ್ಟುಗಳನ್ನು ತಾವೆ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ದೇವಸ್ಥಾನದ ಫ್ಯಾನ್‌ಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದು ಇಒ ನೋಟಿಸ್‌ನಲ್ಲಿ ಪ್ರಸ್ತಾಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಅರ್ಚಕ ಪಿ.ಗಾದೆಪ್ಪ ಅವರು, ಇಒ ಹನುಮಂತಪ್ಪ ನಮ್ಮ ವಿರುದ್ಧ ಆರೋಪಿಸಿರುವ ವಿಷಯಗಳ ಬಗ್ಗೆ ಯಾವುದೇ ದಾಖಲೆಗಳು ಒದಗಿಸಿಲ್ಲ. ದೇವಸ್ಥಾನದಲ್ಲಿ ಕೆಲವೊಂದು ಕಾಮಗಾರಿಗಳ ಭೂಮಿಪೂಜೆಗೆ ಬೇರೆ ಅರ್ಚಕರನ್ನು ಕರೆಸಿ ಪೂಜೆ ಹಾಗೂ ಯಾವ ಅನುದಾನದಿಂದ ನೆರವೇರಿಸಲಾಗಿದೆ ಎಂಬುದಾಗಿ ಪ್ರಶ್ನಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಡಿಸಿ, ಎಸಿ, ಆಯುಕ್ತರಿಗೆ ದೂರು ನೀಡಲಾಗಿದೆ. ಆದರೆ, ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ಮೇಲಧಿಕಾರಿಗಳಿಗೆ ದಿಕ್ಕು ತಪ್ಪಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನೋಟಿಸ್ ನೀಡಲಾಗಿದೆ. ಆದ್ದರಿಂದ, ನಿಯಾಮಾನುಸಾರ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಲಾಗುವುದು ಎಂದು ಇಒ ಹನುಮಂತಪ್ಪಗೆ ನೋಟಿಸ್ ನೀಡಿದ್ದಾರೆ.