ಯೂರಿಯಾ ಹೆಚ್ಚಿನ ಬೆಲೆಗೆ ಮಾರಾಟ ಆರೋಪ

Allegations of selling urea at high prices
Published on

ನರಗುಂದ: ತಾಲೂಕಿನ ರೈತರಿಗೆ ಸಮರ್ಪಕ ಗೊಬ್ಬರ ಸಿಗದೇ ಪರದಾಡುವಂತಾಗಿದ್ದು, ಪಟ್ಟಣದಲ್ಲೂ ರೈತರು ಯೂರಿಯಾ ಗೊಬ್ಬರಕ್ಕಾಗಿ ಗುರುವಾರ ಮುಗಿಬಿದ್ದಿದ್ದರು.

ರಸಗೊಬ್ಬರ ಬಂದಿರುವ ವಿಷಯ ಗೊತ್ತಾಗಿ ಖರೀದಿಸಲು ನೂರಾರು ರೈತರು ಪಟ್ಟಣದ ಅಂಗಡಿಗಳ ಎದುರು ಜಮಾಯಿಸಿದ್ದರು. ರೈತರು ದಿನವಿಡೀ ಸರದಿಯಲ್ಲಿ ನಿಂತು ಕಾಯುವಂತಾದರೆ, ಸಗಟು ಮಾರಾಟಗಾರರು ಪೊಲೀಸರ ಭದ್ರತೆಯಲ್ಲಿ ರಸಗೊಬ್ಬರ ಮಾರುವಂತಾಯಿತು.

ತಾಲೂಕಿಗೆ ಪೂರೈಕೆಯಾದ ಯೂರಿಯಾ ಗೊಬ್ಬರವನ್ನು ಪಕ್ಕದ ತಾಲೂಕಿನವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವೆಡೆ ಯೂರಿಯಾ ಜತೆಗೆ ಬೇರೆ ಲಿಂಕ್ ಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು.

ಮಾಹಿತಿ ತಿಳಿದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಹಾಗೂ ವಿಚಕ್ಷಣಾ ದಳ ಅಧಿಕಾರಿ ತಿಪ್ಪೇಸ್ವಾಮಿ ಅವರು ಪಟ್ಟಣದ ಅಗ್ರೋ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಎರಡು ಕೃಷಿ ಪರಿಕರ ಮಾರಾಟಗಾರರ ಮಳಿಗೆಗೆ ನೋಟಿಸ್ ನೀಡಿದರು. ಕೃಷಿ ಇಲಾಖೆ ಸಿಬ್ಬಂದಿ ವಿನಾಯಕ ಬೆಳವಣಿಕಿ, ಶಿವಾಜಿ ಸಾಠೆ ಇತರರಿದ್ದರು.

ಕೊಣ್ಣೂರಿನಲ್ಲಿ ಮೂವರು ಮಾರಾಟಗಾರರಿಗೆ ನೋಟಿಸ್: ರಾಜಕೀಯ ಹಿನ್ನೆಲೆ ಹೊಂದಿರುವ ಬಾಹುಳ್ಯರು ತಮ್ಮ ಅವಶ್ಯಕತೆಗಿಂತ ಹೆಚ್ಚಿನ ಗೊಬ್ಬರ ಖರೀದಿಸಿ, ಅನಧಿಕೃತ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಿ ಕೊಣ್ಣೂರಿನ ನೂರಾರು ರೈತರು ಗುರುವಾರ ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಮಾಹಿತಿ ತಿಳಿದ ತಹಸೀಲ್ದಾರ್ ಶ್ರೀಶೈಲ ತಳವಾರ, ಕೃಷಿ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಹಾಗೂ ಸಿಬ್ಬಂದಿ ಕೊಣ್ಣೂರಿಗೆ ಭೇಟಿ ನೀಡಿದರು. ಈ ವೇಳೆ ರೈತರು ಗೋದಾಮಿನಲ್ಲಿ ಯೂರಿಯಾ ಚೀಲ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳು ಹೋಗಿ ಪರಿಶೀಲಿಸಲಾಗಿ, 70 ಚೀಲಗಳು ಇರುವುದು ಪತ್ತೆಯಾಯಿತು. ಆಗ ನಾಲ್ವರು ರೈತರು, ಸಂಗ್ರಹಿಸಿರುವ ಚೀಲಗಳು ಮೂರು ಅಗ್ರೋ ಕೇಂದ್ರಗಳಿಂದ ನಾವು ಖರೀದಿಸಿ ಇಟ್ಟಿರುವುದು ಎಂದು ಕೆಲ ದಾಖಲೆಯೊಂದಿಗೆ ಸ್ಪಷ್ಟನೆ ನೀಡಿದರು. ಆಗ ಅಧಿಕಾರಿಗಳು ರಾಜ್ ಅಗ್ರೋ ಸೆಂಟರ್, ಕರ್ನಾಟಕ ಅಗ್ರೋ ಸೆಂಟರ್, ಶ್ರೀ ಸಿದ್ಧಲಿಂಗೇಶ್ವರ ಅಗ್ರೋ ಟ್ರೇಡರ್ಸ್ ಮಳಿಗೆಗೆ ಭೇಟಿ ನೀಡಿ, ಬಿಲ್, ದಾಸ್ತಾನು, ಮಾರಾಟ ವಿವರ ಪರಿಶೀಲಿಸಿದರು. ಆಗ ರೈತರ ಮಾಹಿತಿ ಹಾಗೂ ಅಗ್ರೋಗಳ ನೀಡಿದ ಮಾಹಿತಿಗೆ ತಾಳೆಯಾಗಲಿಲ್ಲ. ಹೀಗಾಗಿ, ಮೂರು ಅಗ್ರೋ ಕೇಂದ್ರಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net