ಆಸ್ಪತ್ರೆ ಎದುರು ರೋಗಿ ಸಂಬಂಧಿಕರ ಪ್ರತಿಭಟನೆ

12HSN2
Published on

  • ವಿಜಯವಾಣಿ ಸುದ್ದಿಜಾಲ ಹಾಸನ
    ಚಿಕಿತ್ಸೆಗೆ ನಿಗದಿಗಿಂತ ಹೆಚ್ಚಿನ ದರ ನಿಗದಿಪಡಿಸಿ ಬಡ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ನಗರದ ಬಿಎಂ ರಸ್ತೆಯಲ್ಲಿರುವ ಆಸ್ಪತ್ರೆ ಎದುರು ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.
    ತಾಲೂಕಿನ ದೊಡ್ಡಗೇಣಿಗೆರೆ ನಿವಾಸಿ ವೇಣುಕುಮಾರ್ ಎಂಬುವರನ್ನು ಜೂ. 14 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯ ಸ್ಕ್ಯಾನಿಂಗ್ ಮಾಡಿಸಿದ್ದ ವೈದ್ಯರು ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಶಸ್ತ್ರ ಚಿಕಿತ್ಸೆಗೆ 85 ಸಾವಿರ ರೂ. ಖರ್ಚಾಗುತ್ತದೆ ಎಂದು ಹೇಳಿದ್ದರು. ಆದರೆ ಬಿಲ್‌ನಲ್ಲಿ 90 ಸಾವಿರ ರೂ. ನಮೂದಿಸಿ ಹೆಚ್ಚುವರಿಯಾಗಿ 5 ಸಾವಿರ ರೂ. ಪಾವತಿಸಲು ಕಟ್ಟಪ್ಪಣೆ ವಿಧಿಸಿದ್ದರು. ಔಷಧ ಮಾತ್ರೆಗಳಿಗೆಲ್ಲ ಲಕ್ಷಾಂತರ ರೂ. ಖರ್ಚು ಮಾಡಿಸಿದ್ದಾರೆ ಎಂದು ಆರೋಪಿಸಿದರು.
    ಸಕಲೇಶಪುರ ಮೂಲದ ರಶ್ಮಿ ಮಾತನಾಡಿ, ಜೂ.13 ರಂದು ದಾಖಲಾದ ರೋಗಿಗೂ ಇದೇ ರೀತಿಯ ಕಿರುಕುಳ ನೀಡಿದ್ದಾರೆ. ಸಾಲ ಸೋಲ ಮಾಡಿ ರೋಗಿಯನ್ನು ಮನೆಗೆ ಕರೆದೊಯ್ಯಲಾಯಿತು. ಇಲ್ಲಿ ಚಿಕಿತ್ಸೆಯೂ ಸರಿಯಾಗಿ ಸಿಗುವುದಿಲ್ಲ ಎಂದು ದೂರಿದರು.
    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್‌ಕುಮಾರ್, ಆಸ್ಪತ್ರೆ ಆಡಳಿತ ಮಂಡಳಿ ಜತೆಗೆ ಮಾತುಕತೆ ನಡೆಸಿ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿದಾಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂತು.
    ಆಸ್ಪತ್ರೆ ಆಡಳಿತ ಮಂಡಳಿ ಕಡಿಮೆ ಹಣ ಪಾವತಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಡಿಎಚ್‌ಒ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net