

ಆರ್.ತುಳಸಿಕುಮಾರ್ ಬೆಂಗಳೂರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಪೌರಕಾರ್ಮಿಕರ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಅನರ್ಹರಿಗೆ ಮಣೆ ಹಾಕಿದ್ದು, ಅಕ್ರಮವಾಗಿವಾಗಿ ಹಲವರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಇದರ ಹಿಂದೆ ಅಧಿಕಾರಿಗಳ ಕಾಣದ ಕೈ ಕೆಲಸ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೋರಿ ಲೋಕಾಯುಕ್ತಕ್ಕೆ ದೂರೊಂದು ದಾಖಲಿಸಲಾಗಿದೆ.
ಕೆಲ ವರ್ಷಗಳ ಹಿಂದೆಯೇ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ನೇಮಕದಲ್ಲಿ ನಿಯಮ ಪಾಲಿಸಲು ಸಾಧ್ಯವಾಗದ ಕಾರಣ ನಾಲ್ಕೈದು ವರ್ಷದಿಂದ ಪ್ರಕ್ರಿಯೆ ಕುಂಟುತ್ತಾ ಸಾಗಿದೆ. ಈಗ ಪಟ್ಟಿ ಅಂತಿಮಗೊಳಿಸುವ ವೇಳೆ ಪೌರಕಾರ್ಮಿಕರಲ್ಲದವರಿಗೂ ಕಾಯಂ ಕೆಲಸ ನೀಡಿ ಸರ್ಕಾರದ ಆಶಯವನ್ನೇ ಗಾಳಿಗೆ ತೂರಲಾಗಿದೆ. ನೇಮಕಾತಿ ಹೊಣೆ ಹೊತ್ತಿರುವ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ವಿಶೇಷ ಆಯುಕ್ತ (ಆಡಳಿತ ) ಡಾ. ಅವಿನಾಶ್ ರಾಜೇಂದ್ರ ಮೆನನ್ ಅವರು ಅಕ್ರಮಕ್ಕೆ ನೀರೆರೆದಿದ್ದಾರೆಂದು ಆರೋಪಿ ಈ ಇಬ್ಬರೂ ಹಿರಿಯ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎಂ.ಎನ್. ಚಂದ್ರು ಅವರು ಕಂಪ್ಲೆಂಟ್ ಕೊಟ್ಟಿದ್ದಾರೆ.
ನೇಮಕಾತಿಗೆ ಸರ್ಕಾರದ ಒಪ್ಪಿಗೆ:
ಬಿಬಿಎಂಪಿಯಲ್ಲಿ ಸ್ವಚ್ಛತಾಗಾರರ ಸಂಖ್ಯೆ ತೀರಾ ಕಡಿಮೆ ಇರುವ ಕಾರಣ ಹೊಸ ನೇಮಕಾತಿ ಮಾಡಿಕೊಳ್ಳಲು ಹಲವು ವರ್ಷದಿಂದ ಒತ್ತಾಯ ಕೇಳಿಬಂದಿತ್ತು. ಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಕಾಯಂ ಮಾಡುವಂತೆಯೂ ಹಲವು ಬಾರಿ ಪ್ರತಿಭಟನೆ ನಡೆದಿತ್ತು. ಆ ಬಳಿಕ 2022-23 ಹಾಗೂ 2023-24ನೇ ಸಾಲಿನಲ್ಲಿ ಕ್ರಮವಾಗಿ 11,307 ಹಾಗೂ 3,673 ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕಗೊಳಿಸಲು ಅಧಿಸೂಚನೆ ಹೊರಡಿಸಲಾಯಿತು. ಇದಕ್ಕಾಗಿ ಕನಿಷ್ಢ 2 ವರ್ಷ ನೇರಪಾವತಿ ದಿನಗೂಲಿ ಹಾಗೂ ಕ್ಷೇಮಾಭಿವೃದ್ಧಿ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಪರಿಗಣಿಸಲು ಷರತ್ತು ವಿಧಿಸಲಾಗಿತ್ತು. ಆದರೆ, ಈ ನಿಯಮ ಉಲ್ಲಂಘಿಸಿರುವ ಪಾಲಿಕೆ ಅಧಿಕಾರಿಗಳು ಪೌರಕಾರ್ಮಿಕರನ್ನು ಉಸ್ತುವಾರಿ ಮಾಡುವ ಮೇಸಿಗಳನ್ನು (ಸೂಪರ್ ವೈಸರ್) ಸ್ವಚ್ಛತಾ ಪೌರಕಾರ್ಮಿಕರೆಂದು ಪರಿಗಣಿಸಿ ಅಂತಿಮ ನೇಮಕಾತಿ ಆದೇಶ ಹೊರಡಿಸಲಾಗಿದೆ. ಈಗಾಗಲೇ 759 ಮಂದಿ ಮೇಸೀಗಳಿದ್ದರೂ, ಅದೇ ಹುದ್ದೆಗಳಿಗೆ ಇತರರನ್ನು ಸೇರ್ಪಡೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮತ್ತೆ ಮತ್ತೆ ಪಟ್ಟಿ ಬದಲು?:
ಬಿಬಿಎಂಪಿಯಲ್ಲಿ ಸದ್ಯ 1,435 ಕಾಯಂ ಪೌರಕಾರ್ಮಿಕರಿದ್ದಾರೆ. ಇವರ ಜತೆಗೆ ನೇರ ನಗದು ಪಾವತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು 15,530 ಸಂಖ್ಯೆಯಲ್ಲಿದ್ದಾರೆ. ಈ ಪೈಕಿ 11,307 ಹಾಗೂ 3,673 ಪೌರಕಾರ್ಮಿಕರ ಹುದ್ದೆಗಳ ನೇಮಕ್ಕಾಗಿ ಹೊರಡಿಸಿರುವ ಎರಡು ಅಧಿಸೂಚನೆ ಅನ್ವಯ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಕರಡು ಪಟ್ಟಿಯಲ್ಲಿ ಸ್ಥಾನ ಪಡೆದವರನ್ನು ನಿಯಮಾನುಸಾರ ಅಂತಿಮ ಪಟ್ಟಿಗೆ ಸೇರಿಸಿ ನೇಮಕಾತಿ ಆದೇಶ ನೀಡಲಾಗುತ್ತದೆ. ಆದರೆ, ಮೇಸ್ತ್ರಿಗಳನ್ನು ಪೌರಕಾರ್ಮಿಕರ ಹೆಸರಿನಲ್ಲಿ ಸೇರ್ಪಡೆ ಮಾಡಿರುವುದು ಹಾಗೂ ಕನ್ನಡ ಬಾರದವರಿಗೂ ಅವಕಾಶ ಕಲ್ಪಿಸಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಈ ಆರೋಪದ ಬಳಿಕ ಮತ್ತೆ ಮತ್ತೆ ಪಟ್ಟಿ ಬದಲಿಸಲಾಗಿದೆ ಎನ್ನಲಾಗಿದೆ.
ನಿಯಮ ಸಡಿಲಿಕೆಗೆ ಸರ್ಕಾರ ನಕಾರ:
ಪೌರಕಾರ್ಮಿಕರ ನೇಮಕದ ಬಗ್ಗೆ ಹಲವೆಡೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಲಿಕೆಯು ಕಳೆದ ಡಿಸೆಂಬರ್‌ನಲ್ಲಿ ಸರ್ಕಾರಕ್ಕೆ ಪತ್ರ ಬರೆದು ಷರತ್ತು ಸಡಿಲಿಸುವಂತೆ ಪತ್ರ ಬರೆದಿತ್ತು. ಕನ್ನಡ ಪರೀಕ್ಷೆ ನಡೆಸುವುದು ಹಾಗೂ ಪ್ರಮಾಣಪತ್ರಗಳ ಪೊಲೀಸ್ ಪರಿಶೀಲನೆ ಪ್ರಕ್ರಿಯೆ ಕೈಬಿಡಬೇಕು ಎಂಬ ಮನವಿಯನ್ನು ಸರ್ಕಾರ ಒಪ್ಪದೆ ಪಾಲಿಕೆಗೆ ಎಚ್ಚರಿಕೆ ನೀಡಿತ್ತು. ಆದರೂ, ಬಿಬಿಎಂಪಿ ಹಿರಿಯ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ನೇಮಕ ಮಾಡಿ ತಪ್ಪು ಮುಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಹರನ್ನು ನೇಮಿಸಿಕೊಳ್ಳುವ ಭರದಲ್ಲಿ ಅನರ್ಹರು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಲ್ಲದವರಿಗೂ ಹುದ್ದೆ ನೀಡಲಾಗಿದೆ. ಸೂಪರ್‌ವೈಸರ್‌ಗಳನ್ನು ಪೌರಕಾರ್ಮಿಕರೆಂದು ಪರಿಗಣಿಸುವುದಾದರೆ ಈಗಾಗಲೇ ಮೇಸಿ ಕೆಲಸದವರ ಕಾರ್ಯಭಾರ ಏನು? ಸರ್ಕಾರ ನೀಡಿದ್ದ ಸೂಚನೆ ಮೀರಿ ಆಯ್ಕೆಪಟ್ಟಿ ತಯಾರಿಸಿರುವುದನ್ನು ಮರೆಮಾಚಲು ಅಧಿಕಾರಿಗಳು ಅಕ್ರಮದ ಮೊರೆ ಹೋಗಿದ್ದಾರೆ.
- ಎಂ.ಬಿ.ನಾಗಣ್ಣ, ಕರುನಾಡ ಸೇವಕರು (ಮೈಸೂರು ವಿಭಾಗ) ಸಂಘಟನೆಯ ಅಧ್ಯಕ್ಷ