ಮೈಸೂರು: ನಂಜನಗೂಡು ತಾಲೂಕಿನ ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಅಗಿರುವ ಬಗ್ಗೆ ಮೈಮುಲ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆದರ್ಶ ತಿಳಿಸಿದರು.
ಹಾಡ್ಯದ ಹಾಲು ಉತ್ಪಾದಕರ ಸಂಘದಲ್ಲಿ ರೈತರು ನೀಡುವ ಹಾಲಿನೊಂದಿಗೆ ನೀರು ಮಿಶ್ರಣ ಮಾಡಿ ಕಳುಹಿಸಲಾಗಿದೆ. ಪರೀಕ್ಷೆ ವೇಳೆ ಕೆಎಂಎಫ್‌ಗೆ ಶುದ್ಧವಾದ ಹಾಲು ನೀಡಿ ನಂತರ ಕಲಬೆರಕೆ ಹಾಲು ಪೂರೈಸಲಾಗಿದೆ ಎನ್ನುವ ಆರೋಪವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಕಾರ್ಯದರ್ಶಿ ತನ್ನ ಕುಟುಂಬದ 9 ಜನರ ಹೆಸರಿನಲ್ಲಿ ಹಾಲು ನೀಡಿರುವಂತೆ ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬ ಸದಸ್ಯ 70 ರಿಂದ 80 ಲೀಟರ್ ಹಾಲು ನೀಡಿರುವುದಾಗಿ ದಾಖಲೆಯಲ್ಲಿದೆ. ನಿಜವಾಗಲೂ ಈ 9 ಜನರು ಹಾಲನ್ನೇ ನೀಡಿಲ್ಲ. ಈ ಅವ್ಯವಹಾರದಲ್ಲಿ ತಿಂಗಳಿಗೆ ಕನಿಷ್ಠ 2.80 ಲಕ್ಷ ರೂ. ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಈಗಾಗಲೆ ಮೈಮುಲ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸಹಕಾರ ಸಂಘಗಳ ಉಪನಿಬಂಧಕರು ಈ ಬಗ್ಗೆ ಪರಿಶೀಲನೆ ನಡೆಸಬೇಕು. ಸಂಘದಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು. ಆದರೆ ಇದಾದ ಬಳಿಕ ಯಾವುದೇ ಕ್ರಮಕೈಗೊಂಡಿಲ್ಲ ಎಂದರು. ಸಂಘದ ಷೇರುದಾರರಾದ ರಾಮಮೂರ್ತಿ, ತಗಡೂರು ನಾಯಕ, ನಾಗೇಶ್ ಇದ್ದರು.