ಈ ಭಾಗದ ನಿರುದ್ಯೋಗಿಗಳಿಗೆ ಅನ್ಯಾಯ ಆರೋಪ

h17-NWKRTC 3
Published on

ಹುಬ್ಬಳ್ಳಿ: ಚಾಲಕರ ನೇಮಕಾತಿಯಲ್ಲಿ ನ್ಯಾಯ ಒದಗಿಸುವಂತೆ ಕೋರಿ ನೊಂದ ಅಭ್ಯರ್ಥಿಗಳು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಎಂ. ಪ್ರಿಯಾಂಗಾ ಅವರೊಂದಿಗೆ ಚರ್ಚಿಸಿದರಲ್ಲದೇ, ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸುವಂತೆ ಮಂಗಳವಾರ ಮನವಿ ಮಾಡಿದರು.

ಇಲ್ಲಿಯ ಗೋಕುಲ ರಸ್ತೆಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಮುಂದೆ ನೂರಾರು ಅಭ್ಯರ್ಥಿಗಳು ಜಮಾಯಿಸಿ ತಮ್ಮ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕೆಂದು ಒತ್ತಾಯಿಸಿದರು. 2019ರ ಅಧಿಸೂಚನೆ ಪ್ರಕಾರ ನೇಮಕಾತಿ ಮಾಡಿಕೊಳ್ಳದೆ ಸಾಕಷ್ಟು ಹುದ್ದೆಗಳನ್ನು ಕಡಿತಗೊಳಿಸಿ ಈ ಭಾಗದ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಲಾಗಿದೆ. ಹಣಕಾಸು ಇಲಾಖೆಯ ತಪ್ಪು ನಿರ್ಧಾರವು ಸಾವಿರಾರು ಅಭ್ಯರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಹಿಂದಿನ ಅಧಿಸೂಚನೆಯಂತೆ ನೇಮಕಾತಿ ಮಾಡಿಕೊಳ್ಳಲು ಸಂಸ್ಥೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಹೋರಾಟಗಾರ ಸುಭಾಷಸಿಂಗ್ ಜಮಾದಾರ ಮಾತನಾಡಿ, ವಾರದ ಹಿಂದೆ ನಮ್ಮ ಬೇಡಿಕೆಗಳನ್ನು ವ್ಯವಸ್ಥಾಪಕ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ದೆವು. ಉತ್ತರ ಪಡೆಯುವ ನಿಟ್ಟಿನಲ್ಲಿ ಮತ್ತೊಮ್ಮೆ ಅವರೊಂದಿಗೆ ಚರ್ಚಿಸಿದ್ದೇವೆ. ಅಭ್ಯರ್ಥಿಗಳ ಪರವಾಗಿ ಸಲ್ಲಿಸಿದ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳಿಗೆ ನಾವು ಬದ್ಧರಾಗಿದ್ದೇವೆ. ನಮ್ಮ ಬೇಡಿಕೆಯಂತೆ ನೇಮಕಾತಿ ಮಾಡಿಕೊಂಡರೆ ಹೊಸ ನೇಮಕಾತಿಗೆ ತಗಲುವ ಸುಮಾರು ಮೂರು-ನಾಲ್ಕು ಕೋಟಿ ರೂ. ಸಂಸ್ಥೆಗೆ ಉಳಿಯಲಿದೆ. ಸಕಾಲಕ್ಕೆ ಸಂಸ್ಥೆಗೆ ಅಗತ್ಯವಿರುವ ಸಿಬ್ಬಂದಿ ದೊರೆಯಲಿದ್ದಾರೆ. ಆಗಿರುವ ಅನ್ಯಾಯದ ಕುರಿತು ಈ ಭಾಗದ ಸಚಿವರು, ಶಾಸಕರನ್ನು ಭೇಟಿಯಾಗಿ ಒತ್ತಾಯಿಸಿದ್ದೇವೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳೊಂದಿಗೆ ಸಾರಿಗೆ ಸಚಿವರನ್ನು ಭೇಟಿಯಾಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದರು. ಈ ಕುರಿತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ ಎಂದು ವಿವರಿಸಿದರು.

ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ನೇಮಕಾತಿಯಲ್ಲಿ 2019ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಒಂದು ಬಾರಿ ವಯೋಮಿತಿಯಲ್ಲಿ ಸಡಿಲಿಕೆ ನೀಡುವ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಅಭ್ಯರ್ಥಿಗಳಿಗೆ ತಿಳಿಸಿದ್ದೇವೆ. ತಾವು ಸಲ್ಲಿಸಿದ ಬೇಡಿಕೆಗಳನ್ನು ಪರಿಗಣಿಸುವಂತೆ ಮತ್ತೆ ಮನವಿ ಮಾಡಿದ್ದಾರೆ. ಈ ಬೇಡಿಕೆಗಳು ಸರ್ಕಾರದ ಹಂತದಲ್ಲಿ ಆಗಬೇಕಿದೆ. ಆದರೆ 2019ರ ಅಧಿಸೂಚನೆಯಲ್ಲಿ ನೇಮಕಾತಿ ವೇಳೆ ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ಹುದ್ದೆಗಳ ಮಾರ್ಪಾಡು ಮಾಡುವ ಸೂಚನೆಯನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ವಿವರಿಸಿದರು.

ಸಂಸ್ಥೆಗೆ ಜಿಸಿಸಿ ಮಾದರಿಯ ಇ-ಬಸ್‌ಗಳು ಬರುವುದರಿಂದ ನಮಗೆ ಚಾಲಕರಿಗಿಂತ ನಿರ್ವಾಹಕರ ಅಗತ್ಯವಿದೆ. ಈ ಯೋಜನೆ ಪ್ರಗತಿ ಅಂತಿಮ ಹಂತದಲ್ಲಿದೆ. ಸರ್ಕಾರ ನಮಗೆ ಚಾಲಕ/ನಿರ್ವಾಹಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವಂತೆ ಹಣಕಾಸು ಇಲಾಖೆಯಿಂದ ಅನುಮತಿ ಬಂದಿದೆ. ಆ ಪ್ರಕಾರ ನಾವು ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಒಳ ಮೀಸಲಾತಿ ಪೂರ್ಣಗೊಳ್ಳದ ಹೊರತು ಹೊಸದಾಗಿ ನೇಮಕಾತಿ ಮಾಡಿಕೊಳ್ಳುವಂತಿಲ್ಲ. ಇದು ಪೂರ್ಣಗೊಂಡ ನಂತರ ಹೊಸದಾಗಿ ಚಾಲಕ/ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.

ನೇಮಕಾತಿ ಸಮಿತಿ ಅಧ್ಯಕ್ಷ ಹಾಗೂ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಪ್ರಮುಖರಾದ ಮಂಜುನಾಥ ಮಲಶೆಟ್ಟಿ, ಜಿ.ಎನ್. ಮಾಲತೇಶ, ಖಲಂದರ ಹುಬ್ಬಳ್ಳಿ, ಪ್ರಸಾದ ಕರನಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net