

ಕುಂದಗೋಳ: ಪಟ್ಟಣ ಪಂಚಾಯತಿಯಲ್ಲಿ ಖಾಸಗಿ ಏಜೆನ್ಸಿ ಮೂಲಕ 10 ಪೌರ ಕಾರ್ಮಿಕರನ್ನು ಅನಧಿಕೃತವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಸೋಮವಾರ ಪಪಂ ಕಚೇರಿ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಹಾಗೂ ಗಣೇಶ ಕೋಕಾಟೆ ಮಾತನಾಡಿ, ಸರ್ಕಾರದ ಆದೇಶವಿಲ್ಲದೆ ಯಾವ ಆಧಾರದ ಮೇಲೆ 10 ಜನ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಅಲ್ಲದೆ, ನೇಮಕಾತಿಗಾಗಿ ಲಂಚ ಪಡೆದ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಮುಖ್ಯಾಧಿಕಾರಿಯವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಪ.ಪಂ. ಸದಸ್ಯ ಗಣೇಶ ಕೋಕಾಟಿ ಮಾತನಾಡಿ, ಈ ನೇಮಕಾತಿಯನ್ನು ರದ್ದುಪಡಿಸಿ, ಈ ಮೊದಲು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದವರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ ಮಾತನಾಡಿ, ಕುಂದಗೋಳ ಪಟ್ಟಣ ಪಂಚಾಯಿತಿಯಲ್ಲಿ 10 ಜನ ಕಾರ್ಮಿಕರನ್ನು ನೇಮಿಸಿರುವುದು ಸರ್ಕಾರದ ಆದೇಶದ ಉಲ್ಲಂಘನೆಯಾಗಿದೆ. ಆದ್ದರಿಂದ ಗುತ್ತಿಗೆಯನ್ನು ರದ್ದುಪಡಿಸಿ, ಈ ಪ್ರಕರಣದಲ್ಲಿ ಅಧಿಕಾರಿಗಳ ತಪ್ಪು ಇದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಹೊಸದಾಗಿ ಪೌರ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಈ ಹಿಂದೆ ಕೆಲಸ ಮಾಡಿದ ಕಾರ್ಮಿಕರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಪೌರ ಕಾರ್ಮಿಕ ಪ್ರವೀಣ ಚೂರಿ ಅವರು 2023ರಲ್ಲಿ ಮರಣ ಹೊಂದಿದ್ದು ಅವರ ಕುಟುಂಬದ ಸದಸ್ಯರಿಗೆ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು.
ಪಪಂ ಮುಖ್ಯಾಧಿಕಾರಿ ಮಾತನಾಡಿ, ಜುಲೈ 8ರಂದು ಪಪಂ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ತುರ್ತು ಸಭೆ ಕರೆದು ಈ ವಿಷಯದ ಕುರಿತು ಚರ್ಚಿಸಿ, ತೀರ್ಮಾನಿಸಲಾಗುತ್ತದೆ ಎಂದರು.
ಸಿದ್ದಪ್ಪ ಚೂರಿ, ಈಶ್ವರ ಬೇವಿನಮರದ, ಭರಮಪ್ಪ ತಿರಕಮ್ಮನವರ, ಫಕೀರಪ್ಪ ಬೇವಿನಮರದ, ಚನ್ನಬಸಪ್ಪ ಕನಕನ್ನವರ, ಮಾರುತಿ ನಾಗಣ್ಣವರ, ಸಂಜು ಕುಟುಬಂದ, ಯಲ್ಲವ್ವ ಕಾಗಿ, ಮಲ್ಲವ್ವ ತಿರಕಮ್ಮನವರ, ಶೇಖವ್ವ ಬೇವಿನಮರದ, ಶರಣವ್ವ ಛಲವಾದಿ ಇತರರಿದ್ದರು.