

ಅಣ್ಣಿಗೇರಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಮೆಹಬೂಬಿ ನವಲಗುಂದ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತು.
ಸದಸ್ಯರ ಗದ್ದಲ, ಗಲಾಟೆ, ವಾಗ್ವಾದ ನಡೆದು ಪರಿಸ್ಥಿತಿ ಶಾಂತಗೊಳಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಪುರಸಭೆ ವಹಿಸಿದ್ದರು.
ಪುರಸಭೆ ಮುಖ್ಯಾಧಿಕಾರಿ ವೈ.ಜೆ. ಗದ್ದಿಗೌಡರ ಸಭೆಯ ನಡಾವಳಿ ಓದಿ ಅನುಮೋದನೆ ಪಡೆಯಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ಸದಸ್ಯರು, ಅಣ್ಣಿಗೇರಿ ಪಟ್ಟಣದ ವಾರ್ಡ್ಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಸಾಮಾನ್ಯ ಸಭೆಯಲ್ಲಿ ಜನರ ಸಮಸ್ಯೆ ಬಗ್ಗೆ ರ್ಚಚಿಸಬೇಕು. ಬದಲಾಗಿ ಅಧ್ಯಕ್ಷರೇ ಅಭಿವೃದ್ಧಿ ಕಾಮಗಾರಿ ಮಂಜೂರು ವಿಷಯಗಳನ್ನು ಚರ್ಚೆಗಿಟ್ಟು ಹಣ ಹೊಡೆಯುವ ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ನಾಗರಾಜ ದಳವಾಯಿ ಆರೋಪಿಸಿದರು.
ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರ ಬಳಿಕ ಭೂಮಿ ಅಭಿವೃದ್ಧಿಗೊಳಿಸಲು ಮಂಜೂರಾತಿ ಕೊಡಬೇಕು ಎಂದು ಕೆಲ ಸದಸ್ಯರು ಪಟ್ಟು ಹಿಡಿದರು. ಬಳಿಕ ಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಇದೇ ವಿಷಯ ಚರ್ಚೆಗೆ ಬಂದಿತು. ಮುಖ್ಯಾಧಿಕಾರಿ ಮಧ್ಯೆ ಪ್ರವೇಶಿಸಿ ಸಭೆ ನಡಾವಳಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿ ಎಂದು ತಿಳಿಸಿದರು. ಆದರೂ ಪಟ್ಟು ಬಿಡದ ಸದಸ್ಯರು ಸಭೆಯ ಮಧ್ಯೆಯೇ ಹಣದ ಆಮಿಷವೊಡ್ಡಿದ ಆಡಿಯೋವನ್ನು ಸಭೆಗೆ ಕೇಳಿಸಿದರು. ಅಲ್ಲದೆ ಈ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿ ಸಭೆಯಿಂದ ಹೊರನಡೆದರು.
ನೂತನವಾಗಿ ಆಯ್ಕೆಯಾದ ನಾಮನಿರ್ದೇಶಿತ ಸದಸ್ಯರಾದ ವೀರನಾರಾಯಣ ಬೆಂತೂರ, ಮಾರುತಿ ಕಾಳಿ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿ ಸಮಿತಿ ಚೇರ್ಮನ್ ರೆಹಮಾನ್ಸಾಬ ಹೊರಗಿನಮನೆ, ಸದಸ್ಯರಾದ ಸಿ.ಜಿ. ನಾವಳ್ಳಿ, ಶಿವಾನಂದ ಬೆಳಹಾರ, ಎ.ಪಿ. ಗುರಿಕಾರ, ಸುಜಾತಾ ಶ್ಯಾನಭೋಗರ, ಮುದುಕಣ್ಣ ಭಜಂತ್ರಿ, ಈಶ್ವರ ಕಾಳಪ್ಪನವರ, ಅಮೃತ ಮೀಶಿ, ಇತರರಿದ್ದರು.
ಪುರಸಭೆ ಮಾಜಿ ಅಧ್ಯಕ್ಷರ ಮೇಲೆ ಆರೋಪ ಮಾಡಿದ ಸದಸ್ಯನಿಗೆ ನಾವು ಕಾನೂನು ಚೌಕಟ್ಟಿನಲ್ಲಿ ಉತ್ತರ ಕೋಡುತ್ತೇವೆ. ಆದರೆ ಹಣದ ಆಸೆಗಾಗಿ ನಾವು ನಮ್ಮತನವನ್ನು ಮರೆಯಬಾರದು. | ಗಂಗಾ ಕರೆಟ್ಟನವರ, ಪುರಸಭೆ ಮಾಜಿ ಅಧ್ಯಕ್ಷೆ