ಸಿದ್ದರಾಮಯ್ಯ ವಿರುದ್ಧದ ಆರೋಪ ನಿರಾಧಾರ: ವಕೀಲ ಎಂ.ಎ.ಪುಟ್ಟಸಿದ್ದೇಗೌಡ

Published on

ಮೈಸೂರು: ಮುಡಾದಲ್ಲಿ 50:50 ಅನುಪಾತದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡನೀಯ. ಅವರ ಏಳಿಗೆ ಸಹಿಸದವರು ಯಾವುದೇ ದಾಖಲಾತಿ ಇಲ್ಲದಿದ್ದರೂ ಷಡ್ಯಂತ್ರದ ಭಾಗವಾಗಿ ಆರೋಪ ಮಾಡುತ್ತಿದ್ದಾರೆ ಎಂದು ವಕೀಲ ಎಂ.ಎ.ಪುಟ್ಟಸಿದ್ದೇಗೌಡ ದೂರಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಆಧಾರ ರಹಿತವಾಗಿದೆ. ಯಾರೇ ಒಬ್ಬ ವ್ಯಕ್ತಿಯ ಒಡೆತನದ ಅಥವಾ ಮಾಲೀಕತ್ವಕ್ಕೆ ಒಳಪಟ್ಟ ಜಮೀನನ್ನು ಸಾರ್ವಜನಿಕ ಹಿತಾಸಕ್ತಿಯಿಂದ ವಶ ಪಡಿಸಿಕೊಂಡಾಗ ಅವರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಮುಡಾ ಸಹ ಪಾರ್ವತಮ್ಮ ಅವರ ಜಮೀನು ಪಡೆದಿರುವ ಕಾರಣ ಬದಲಿಯಾಗಿ ನಿವೇಶನ ನೀಡಿದೆ. ಇದರಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಕಳೆದ ನಾಲ್ಕೈದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ಇದ್ದು, ರಾಜಕೀಯ ಜೀವನದುದ್ದಕ್ಕೂ ಪರಿಶುದ್ಧತೆ ಮತ್ತು ಪ್ರಾಮಾಣಿಕತೆ ಉಳಿಸಿಕೊಂಡಿದ್ದಾರೆ. ಹೀಗಾಗಿ ಇವರ ಹೆಸರಿಗೆ ಕಳಂಕ ತರಲೆಂದು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದರು.
ಮುಡಾದಲ್ಲಿನ ಅವ್ಯವಹಾರ ಕುರಿತಂತೆ ಕಳೆದ 2000ದಿಂದಲೂ ತನಿಖೆ ನಡೆದಲ್ಲಿ ಸತ್ಯಾಂಶ ಹೊರಗೆ ಬರುತ್ತದೆ. ಆದ್ದರಿಂದ ಮುಡಾದ ಒಟ್ಟಾರೆ ವ್ಯವಹಾರ ಕುರಿತು ತನಿಖೆ ನಡೆಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿನ 40 ಪರ್ಸೆಂಟ್ ಕಮಿಷನ್ ಆರೋಪ ಕುರಿತಂತೆಯೂ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ಎನ್.ಲೋಕೇಶ್, ಜೆ.ಎನ್.ಲಕ್ಷ್ಮಣ್, ಕೆ.ಎಸ್.ಅಂದಾನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net