

ಮಂಗಳೂರು: ಕರಾವಳಿಯ ಕಲೆ ಯಕ್ಷಗಾನವನ್ನು ಜಾಹೀರಾತೊಂದರಲ್ಲಿ ಅವಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿವೆ. ಜಾಹೀರಾತು ಬಗ್ಗೆ ಒಂದೆರಡು ದಿನಗಳಿಂದ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಫೆವಿಕಾಲ್ ಸಂಸ್ಥೆಯ ಜಾಹೀರಾತಿನಲ್ಲಿ ಯಕ್ಷಗಾನದ ವೇಷಧಾರಿಗಳು, ಹಿಮ್ಮೇಳವನ್ನು ವೇದಿಕೆಯೊಂದರ ಮೇಲೆ ತೋರಿಸುವಾಗ ಯಕ್ಷಗಾನ ಕಲೆಗೆ ಅಪಚಾರ ಎಸಗಿದ್ದಾರೆ. ಈ ರೀತಿಯಲ್ಲಿ ಕಲೆಗೆ ಅಪಚಾರ ಸರಿಯಲ್ಲ ಶಾಸಕ ವೇದವ್ಯಾಸ ಕಾಮತ್ ಫೇಸ್ಬುಕ್ನಲ್ಲಿ ಎಂದು ಪೋಸ್ಟ್ ಹಾಕಿದ್ದಾರೆ.
ಜಾಹೀರಾತನ್ನು ಮುಂಬೈ ಮೂಲದ ಸಂಸ್ಥೆ ಸಿದ್ಧಪಡಿಸಿದ್ದು, ಪಾಲ್ಗೊಂಡ ರೂಪದರ್ಶಿಗಳಲ್ಲಿ ಕೆಲವು ಯಕ್ಷಗಾನ ಕಲಾವಿದರೂ ಇದ್ದಾರೆ. ಫೆವಿಕಾಲ್ನವರು, ಜಾಹೀರಾತು ಮಾಡಿದವರು ಕ್ಷಮೆ ಕೇಳಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ. ಆದರೆ ಕೆಲ ಮಂದಿ ಅದರಲ್ಲಿ ತಪ್ಪಿಲ್ಲ, ಜಾಹೀರಾತಿನಲ್ಲಿ ಯಕ್ಷಗಾನವನ್ನು ಅವಮಾನಿಸಿಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ, ಸ್ಥಾನಮಾನ ಕೊಟ್ಟಿದೆ ಎಂದೂ ವಾದಿಸಿದ್ದಾರೆ.
ಜಾಹಿರಾತಿನಲ್ಲಿ ಏನಿದೆ?: ಮೊದಲು ರಾಜನ ಪಾತ್ರಧಾರಿ ಕುಳಿತಾಗ ಸಿಂಹಾಸನ ಮುರಿದು ಬೀಳುತ್ತದೆ, ಅದನ್ನು ನೋಡಿ ಇನ್ನೊಬ್ಬ ಪಾತ್ರಧಾರಿ ನಗುತ್ತಾನೆ. ಅವನನ್ನು ರಾಜವೇಷಧಾರಿ ತಳ್ಳುತ್ತಾನೆ. ಆಗ ಅವನು ಬಿದ್ದು ಅವನ ಸಿಂಹಾಸನವೂ ಮುರಿಯುತ್ತದೆ. ಪರಸ್ಪರ ತಳ್ಳಾಟದಲ್ಲಿ ಇಡೀ ಸೆಟ್ ಕುಸಿಯುತ್ತದೆ. ಅಂತಿಮವಾಗಿ ಫೆವಿಕಾಲ್ನಲ್ಲಿ ಅಂಟಿಸಿದ್ದರೆ ಹೀಗಾಗುತ್ತಿರಲಿಲ್ಲ ಎನ್ನುವುದು ಜಾಹೀರಾತಿನ ಸಾರಾಂಶ.
ಅಕಾಡೆಮಿ ಅಧ್ಯಕ್ಷರ ಸಮರ್ಥನೆ: ಜನಪ್ರಿಯ ಕಲೆಯಾಗಿರುವ ಯಕ್ಷಗಾನವನ್ನು ಫೆವಿಕಾಲ್ ಸಂಸ್ಥೆ ಬಳಸಿಕೊಂಡಿದೆ. ನೋಡಿದ್ದೇನೆ, ಅದರಲ್ಲಿ ಏನು ತಪ್ಪಾಗಿದೆಯೋ ತಿಳಿಯುತ್ತಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಯಕ್ಷಗಾನದ ಮಹತ್ವ ಹೆಚ್ಚಿದೆ ಎಂದ ಅವರು, ಯಕ್ಷಗಾನಕ್ಕೆ ಅವಮಾನ ಆಗಿಲ್ಲ. ಯಕ್ಷಗಾನದ ವೇಷಭೂಷಣ ಇನ್ನಷ್ಟು ದೇಶದಲ್ಲಿ ಪ್ರಚಾರ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.