

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ- ಕಲಘಟಗಿ ರಸ್ತೆಯ ಟೋಲ್ ನಾಕಾದಿಂದ ತೇಜಸ್ವಿನಗರವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ರಸ್ತೆಯ ಎರಡೂ ಬದಿ ಫುಟ್‌ಪಾತ್ ನಿರ್ಮಿಸಿ ಪೇವರ್ಸ್ ಅಳವಡಿಸಲಾಗುತ್ತಿದೆ. ರಸ್ತೆಗಿಂತ ಹೆಚ್ಚು ಎತ್ತರದಲ್ಲಿ ಫುಟ್‌ಪಾತ್ ಮಾಡಿ ಅದಕ್ಕೆ ಪೇವರ್ಸ್ ಹಾಕಲಾಗುತ್ತಿದ್ದು, ಇದು ಅವೈಜ್ಞಾನಿಕ ಎಂದು ಸಾರಸ್ವತಪುರ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಬಹುತೇಕ ಹಿರಿಯ ನಾಗರಿಕರು ವಾಸಿಸುತ್ತಿದ್ದಾರೆ. ಮೊದಲಿದ್ದ ರಸ್ತೆಗೆ ಹೋಲಿಸಿದರೆ ಈಗಿನ ಕಾಂಕ್ರೀಟ್ ರಸ್ತೆಯನ್ನು ಎತ್ತರಿಸಲಾಗಿದೆ. ಇದರಿಂದ ಮನೆಗಳು ರಸ್ತೆಗಿಂತ ಕೆಳಮಟ್ಟದಲ್ಲಿವೆ. ಮಳೆಗಾಲದಲ್ಲಿ ನೀರು ಮನೆಗೆ ನುಗ್ಗುವ ಆತಂಕ ಎದುರಾಗಿದೆ. ಫುಟ್‌ಪಾತ್ ಎತ್ತರ ಮಾಡಿದ್ದರಿಂದ ಹಿರಿಯ ನಾಗರಿಕರು ಸಂಚರಿಸಲು ಅನಾನುಕೂಲವಾಗುತ್ತದೆ. ಅಲ್ಲದೆ, ಕೆಲವರ ಮನೆಗಳ ಅರ್ಧ ಗೇಟ್ ಎತ್ತರಕ್ಕೆ ಪೇವರ್ಸ್ ಅಳವಡಿಕೆಯಾಗಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಈ ಸಮಸ್ಯೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಽಕಾರಿಗಳು, ಪಾಲಿಕೆ ಸಹಾಯಕ ಆಯುಕ್ತ, ಪಾಲಿಕೆ ಸದಸ್ಯ ಆನಂದ ಯಾವಗಲ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅರವಿಂದ ಬೆಲ್ಲದ ಅವರು ಸರ್ಕಾರದ ಯೋಜನೆಯಂತೆ ರಸ್ತೆ ಮತ್ತು ಫುಟ್‌ಪಾತ್ ನಿರ್ಮಿಸಲಾಗುತ್ತಿದೆ. ನೀವೇ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಹವಾಲು ಸಲ್ಲಿಸಲಾಗುವುದು ಎಂದು ನಿವಾಸಿಗಳಾದ ಕಮಲಾ ನಾಡಗೀರ, ವಿ.ವಿ. ರಾವ್, ಸಿ.ವಿ. ರಾವ್, ಲೀನಾ, ಶ್ವೇತಾ, ಸಿಂಧು ಫಡನೀಸ್, ಪ್ರತಾಪ್ ಎಸ್.ಜೆ., ಲಕ್ಷ್ಮೀ ಪಾಟೀಲ, ಅಜಯ ಮೆಟಗುಡ್ಡ ತಿಳಿಸಿದ್ದಾರೆ.