ಕೆತ್ತಿಕಲ್ ಗುಡ್ಡದ ಮಣ್ಣು ಮಾರಾಟ ಆರೋಪ: ತನಿಖೆಗೆ ಒತ್ತಾಯ

Mng_Kettikal
Published on

ವಿಜಯವಾಣಿ ಸುದ್ದಿಜಾಲ ಗುರುಪುರ: ಕುಸಿಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದ ಎಂಎಲ್‌ಸಿ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರಿದ್ದ ಕಾಂಗ್ರೆಸ್ ನಿಯೋಗವು ಅತಿಯಾಗಿ ಮಣ್ಣು ತೆಗೆಯಲಾದ ಅಪಾಯಕಾರಿ ಗುಡ್ಡವನ್ನು ಪರಿಶೀಲಿಸಿತು.

ಬಳಿಕ ಮಾತನಾಡಿದ ಮಂಜುನಾಥ ಭಂಡಾರಿ, ನಾನು ಈಗಾಗಲೇ ಸ್ಥಳೀಯರ ಕಷ್ಟ-ಭಯ ಅರ್ಥ ಮಾಡಿಕೊಂಡಿದ್ದೇನೆ. ಕೆತ್ತಿಕಲ್ ಮೇಲ್ಭಾಗದಲ್ಲಿರುವ ಅಮೃತನಗರದ ಮನೆಗಳಿಗೆ ಅಪಾಯ ಎದುರಾಗಿದೆ. ಮೇಲ್ಭಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಲಾಗುವುದು. ವೆಟ್‌ವೆಲ್ ನಿರ್ಮಾಣ ಮತ್ತು ಕೆತ್ತಿಕಲ್ ಗುಡ್ಡದಿಂದ ಯಥೇಚ್ಛ ಮಣ್ಣು ಮಾರಾಟದ ಬಗ್ಗೆ ಕೇಳಿಬಂದಿರುವ ಆರೋಪಗಳ ತನಿಖೆ ಅವಶ್ಯ ಎಂದರು.

ಕೆತ್ತಿಕಲ್ ಗುಡ್ಡದಿಂದ ಮಣ್ಣು ಮಾರಾಟ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಂದ ತನಿಖೆಯಾಗಬೇಕು. ಮಣ್ಣು ಮಾರಿದವರ ವಿರುದ್ಧ ಜಿಲ್ಲಾಡಳಿತ ಕ್ರಮ ಜರುಗಿಸಬೇಕಾಗುತ್ತದೆ. ಕೆತ್ತಿಕಲ್ ಗುಡ್ಡ ಕುಸಿದರೆ ಬಡಜನರು ಕಷ್ಟ ಅನುಭವಿಸಬೇಕಾಗುತ್ತದೆ. ಬಡವರ ಕಷ್ಟ ಇಂಥವರಿಗೆ ಗೊತ್ತಾಗುತ್ತದೆಯೇ? ಎಂದು ಇನಾಯತ್ ಅಲಿ ಪ್ರಶ್ನಿಸಿದರು.

ಪರಿಹಾರ ಒದಗಿಸಲು ಪ್ರಯತ್ನ

ಮನೆ ಪಕ್ಕದಲ್ಲಿ ಈ ವರ್ಷವೂ ಮತ್ತಷ್ಟು ಗುಡ್ಡ ಕುಸಿದಿದ್ದು, ಮನೆ-ಮಂದಿ ಭೀತಿಯಲ್ಲಿ ದಿನ ಕಳೆಯುತ್ತಿರುವ ತಿರುವೈಲಿನ ಜಯಂತಿ ಡಿ.ಅಮೀನ್ ಅವರ ಮನೆಗೆ ಭೇಟಿ ನೀಡಿದ ಎಂಎಲ್‌ಸಿ ಮಂಜುನಾಥ ಭಂಡಾರಿ ಅವರು ಗುಡ್ಡದ ಬದಿಗೆ ತಡೆಗೋಡೆ ನಿರ್ಮಿಸಲು ಹಾಗೂ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ತಿರುವೈಲು ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಕುಮಾರ್ ಶೆಟ್ಟಿ, ಮುಖಂಡರಾದ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ಪುರುಷೋತ್ತಮ ಮಲ್ಲಿ, ಜಯಲಕ್ಷ್ಮೀ, ಬಾಷಾ ಮಾಸ್ಟರ್, ಗುರುಪುರ ಹೋಬಳಿ ಕಂದಾಯ ನಿರೀಕ್ಷಕ ಪೂರ್ಣಚಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net