

ಶಿರಹಟ್ಟಿ: ಲೋಕೋಪಯೋಗಿ ಇಲಾಖೆಯು ವಿವೇಕ ಯೋಜನೆಯಡಿ 13 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಶಾಲಾ ಕೊಠಡಿಯ ಕಾಮಗಾರಿ ಕಳಪೆಯಾಗಿದೆ ಎಂದು ಮೇಗೇರಿ ಓಣಿ ನಿವಾಸಿಗಳು ಗುತ್ತಿಗೆದಾರನ ವಿರುದ್ಧ ಆರೋಪಿಸಿದ್ದಾರೆ.
ಪಪಂ ಸದಸ್ಯ ಫಕೀರೇಶ ರಟ್ಟಿಹಳ್ಳಿ, ಶಿವಪ್ಪ ಕಲ್ಯಾಣಿ ಮಾತನಾಡಿ, ಮೇಗೇರಿ ಓಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಕೊಠಡಿ ಅಗತ್ಯವಿತ್ತು. 2022-23ರಲ್ಲಿ ವಿವೇಕ ಯೋಜನೆಯಡಿ 13 ಲಕ್ಷ ರೂ.ಅನುದಾನದಲ್ಲಿ ಗುತ್ತಿಗೆದಾರ ಶರಣಪ್ಪ ಸಿಂಧಗಿ ಶಾಲಾ ಕೊಠಡಿ ನಿರ್ಮಾಣ ಆರಂಭಿಸಿದರು. ನಿರ್ಮಾಣದ ಹಂತದಲ್ಲಿ ಕೆಲ ಲೋಪದೋಷ ಕಂಡು ಬರುತ್ತಲೇ ಓಣಿಯ ಹಿರಿಯರು ಎಚ್ಚರಿಸಿದ್ದರೂ ಗುತ್ತಿಗೆದಾರ ನಿರ್ಲಕ್ಷೃ ಮಾಡಿದ್ದರು ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟನೆಗಾಗಮಿಸಿದ ವೇಳೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತೊಂದರೆ ಸರಿಪಡಿಸಲು ಸೂಚನೆ ನೀಡಿದ್ದರೂ ಕ್ಯಾರೇ ಎನ್ನದ ಸ್ಥಿತಿಯಿದೆ. ಕೊಠಡಿಯ ಛಾವಣಿ ಸೋರುತ್ತಿದೆ. ನೆಲದ ಕಲ್ಲಿನ ಹಾಸಿಗೆ, ಕಿಟಕಿ, ಬಾಗಿಲ ಸರಿಯಾಗಿಲ್ಲ ಎಂದು ದೂರಿದರು.
ಶಿವಪ್ಪ ಕಲ್ಯಾಣಿ, ಅಶೋಕ ವರವಿ ಮಾತನಾಡಿ, ಇಷ್ಟೆಲ್ಲ ಅವಾಂತರಕ್ಕೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ನಿರ್ಲಕ್ಷ್ಯ ಕಾರಣವಾಗಿದ್ದು, ಇಂಥ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರನ ಪರವಾನಗಿ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಬೇಕು ಎಂದರು.
ಬಸವರಾಜ ಚಿಕ್ಕತೋಟದ, ಸುರೇಶ ಕುರಿ, ತಿಪ್ಪಣ್ಣ ಮಡ್ಡಿ, ಶಂಕ್ರಪ್ಪ ವರವಿ, ಕುರವತ್ತೆಪ್ಪ ಹಮ್ಮಿಗಿ, ಮಹೇಶ ಕಲ್ಲಪ್ಪನವರ, ಮಹಾದೇವಪ್ಪ ತುಳಿ, ಮಹೇಶ ಉಪ್ಪಾರ, ಉಮೇಶ ಬಕ್ಸದಮ ಬುಡ್ಡೇಸಾಬ್ ಬುವಾಜಿ, ವಿರೂಪಾಕ್ಷ ಕಲ್ಯಾಣಿ, ಚಂದ್ರು ಹಮ್ಮಿಗಿ, ಶಿವಪ್ಪ ತುಳಿ, ಪರಮೇಶ ವರವಿ, ಇತರರಿದ್ದರು.