

ನರಗುಂದ: ಶಾಸಕ ಸಿ.ಸಿ. ಪಾಟೀಲ ಅವರು ನರಗುಂದ ಮತಕ್ಷೇತ್ರದಾದ್ಯಂತ ಮಾಡಿರುವ 500 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ.
ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಸರ್ಕಾರದಿಂದ ಸೂಕ್ತ ತನಿಖೆ ಮಾಡಿಸಲಾಗುತ್ತದೆ ಎಂದು ಮಾಜಿ ಶಾಸಕ ಬಿ.ಆರ್.ಯಾವಗಲ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಸಿ.ಸಿ. ಪಾಟೀಲ ಅವರು ತಾಪಂ ಸಭಾ ಭವನದಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ.
ಮಾಜಿ ಶಾಸಕರನ್ನು ಭೇಟಿ ಮಾಡಿದರೆ ಅವರ ಮೇಲೆ ಲೋಕಾಯುಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದು ಅಕ್ಷಮ್ಯ ಅಪರಾಧ.
ನನಗೆ ಅಧಿಕಾರಿಗಳ ಸಭೆ ನಡೆಸುವ ಅಧಿಕಾರ ಇಲ್ಲದೆ ಇರಬಹುದು. ಆದರೆ, ಎಲ್ಲ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಅಧಿಕಾರವಿದೆ. ಅದನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ’ ಎಂದು ತಿರುಗೇಟು ನೀಡಿದರು.
ಸಿ.ಸಿ. ಪಾಟೀಲ ಅವರ ನಡವಳಿಕೆ, ದಬ್ಬಾಳಿಕೆಯಿಂದಾಗಿ ಕ್ಷೇತ್ರದ ಜನರು ಸಂಪೂರ್ಣ ರೋಸಿ ಹೋಗಿದ್ದಾರೆ. ಶಾಸಕರು ತಮ್ಮ ಸಚಿವ ಸ್ಥಾನದ ಗುಂಗಿನಿಂದ ಹೊರಬರಬೇಕು. ನನ್ನ ವಿರುದ್ಧ ಗಂಂಭೀರ ಆರೋಪ ಮಾಡಿದ್ದಾರೆ.
ಮಾಜಿಯಾಗಿದ್ದು ಮನೆ ಹಿಡಿದುಕುಳಿತುಕೊಳ್ಳಲಿ ಎಂದು ಹೇಳಿದ್ದಾರೆ, ಅದನ್ನು ಹೇಳುವ ಅಧಿಕಾರ ನಿಮಗಿಲ್ಲ, ನಾವು ನಮ್ಮ ಚೌಕಟ್ಟಿನಲ್ಲಿದ್ದೇವೆ, ನಮಗೆ ಕಾನೂನಿನ ಪ್ರಜ್ಞೆಯೂ ಇದೆ.
ಆದ್ದರಿಂದ ನಮಗೆ ಬುದ್ಧಿವಾದ ಹೇಳಲು ಬರಬೇಡಿ. ನೀವು ನಾಲ್ಕು ಬಾರಿ ಆರಿಸಿ ಬಂದಿದ್ದೀರಿ, ನಾನು ಐದು ಬಾರಿ ಗೆದ್ದಿದ್ದೇನೆ, ಸೌಜನ್ಯದಿಂದ ಮಾತನಾಡುವುದನ್ನು ಕಲಿತುಕೊಳ್ಳಿ ಎಂದರು.
ಮತಕ್ಷೇತ್ರದ ಯಾವುದೇ ಇಲಾಖೆ ಅಧಿಕಾರಿಗಳು ಶಾಸಕರ ಬೆದರಿಕೆ ಮಾತುಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ. ನಿಮ್ಮ ಜತೆಗೆ ಸರ್ಕಾರವಿದೆ ಎಂದು ಅಧಿಕಾರಿಗಳಿಗೆ ಬಿ.ಆರ್. ಯಾವಗಲ್ ಸಲಹೆ ನೀಡಿದರು.
ಪುರಸಭೆ ಸದಸ್ಯ ಅಪ್ಪಣ್ಣ ನಾಯ್ಕರ, ರಾಜು ಕಲಾಲ, ಎಫ್.ವೈ. ದೊಡಮನಿ, ಎಂ.ಬಿ. ಅರಹುಣಶಿ, ಗುರುಪಾದಪ್ಪ ಕುರಹಟ್ಟಿ, ಪ್ರವೀಣ ಯಾವಗಲ್ಲ, ವಿವೇಕ ಯಾವಗಲ್ಲ, ಮಲ್ಲಪ್ಪ ಅಬ್ಬಿಗೇರಿ, ಬಿ.ಎನ್. ಮಾನೆ, ಕೆ.ಬಿ. ಖಲೀಪ್, ರಾಮಕೃಷ್ಣ ಗೊಂಬಿ, ವಿಷ್ಣು ಸಾಠೆ, ಪ್ರಕಾಶ ಹಡಗಲಿ ಇತರರಿದ್ದರು.