

ಮೊಳಕಾಲ್ಮೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಯಡಿ 29 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಪಟ್ಟಣದ ಮುಖ್ಯರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ ಎಂದು ಆರೋಪಿಸಿ ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರಸ್ತೆ ನಿರ್ಮಾಣದ ಯೋಜನೆಯ ನೀಲಿನಕ್ಷೆ ಮತ್ತು ಕಾಮಗಾರಿ ವೆಚ್ಚದ ಕುರಿತು ಸಾರ್ವಜನಿಕವಾಗಿ ಪ್ರಕಟ ನೀಡಿಲ್ಲ. ಒಂದು ವರ್ಷದಲ್ಲಿ ಮುಗಿಸಬೇಕಿದ್ದ ಕೆಲಸವನ್ನು 2 ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ. ಇವೆಲ್ಲವೂ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ರಸ್ತೆಯ ಎರಡು ಬದಿ ಪಾದಚಾರಿ ರಸ್ತೆ ಇಲ್ಲ. ರಸ್ತೆ ವಿಭಜಕ ಕಳಪೆ ಆಗಿದೆ. ಚರಂಡಿ ಮೇಲೆ ಹಾಕಿರುವ ಕಬ್ಬಿಣದ ಕಂಬಿಗಳು ಗುಣಮಟ್ಟ ಇಲ್ಲ. ಮಳೆ ನೀರು ಸರಾಗವಾಗಿ ಹರಿಯಲು ಅಗತ್ಯ ಇರುವ ಕಡೆ ಒಳಚರಂಡಿ ನಿರ್ಮಿಸಿಲ್ಲ. ಆಯ್ದ ಕಡೆ ಮಹನಿಯರ ಪುತ್ತಳಿ ಪ್ರತಿಷ್ಠಾನೆಗೆ ಕ್ರಮಕೈಗೊಂಡಿಲ್ಲ. ಅಂಬೇಡ್ಕರ್ ಬಡಾವಣೆಯಲ್ಲಿ 15ಕ್ಕೂ ಹೆಚ್ಚು ದಲಿತರ ಮನೆಗಳು ರಸ್ತೆ ವಿಸ್ತರಣೆ ಕಾರ್ಯಕ್ಕೆ ಬಲಿಯಾಗಿವೆ. ಆದರೆ, ಶ್ರೀಮಂತರ ಮನೆಗಳಿಗೆ ಧಕ್ಕೆ ಆಗಿಲ್ಲ ಎಂದು ದೂರಿದರು.
ಪಟ್ಟಣದ ಮುಖ್ಯರಸ್ತೆ ರಾಜ್ಯದ ಗಡಿ ಮತ್ತು ಆಂಧ್ರ ಸಂಪರ್ಕ ಹೊಂದಿರುವ ಕಾರಣ ಹೆಚ್ಚು ಜನಸಂದಣೆ ಮತ್ತು ವಾಹನಗಳ ದಟ್ಟಣೆ ಇದೆ. ರಸ್ತೆ ವಿಸ್ತರಣೆ 120 ಅಡಿ ಅಗತ್ಯ, ಅವಕಾಶವಿದ್ದರೂ ಕೇವಲ 66 ಅಡಿ ವಿಸ್ತರಣೆ ಕೈಗೊಂಡಿರುವ ಉದ್ದೇಶವೇನು. ಇದರಿಂದ ಇನ್ನಷ್ಟು ಸಮಸ್ಯೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ವಿಷಯ ಕುರಿತು ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರು, ಗುತ್ತಿಗೆದಾರರು, ಸರ್ವಪಕ್ಷ, ಸಂಘಟನೆಗಳ ಸಭೆ ತಹಸೀಲ್ದಾರ್ ಶೀಘ್ರ ಕರೆಯಬೇಕು. ಸ್ಪಂದಿಸದಿದ್ದರೆ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ಮುಖಂಡರಾದ ರವಿಕುಮಾರ, ಎಚ್.ಟಿ.ಚಂದ್ರಣ್ಣ, ಮಂಜುನಾಥ, ನಿಂಗಣ್ಣ, ಬಿ.ಟಿ.ನಾಗಭೂಷಣ, ಪಾಪಯ್ಯ ಇತರರಿದ್ದರು.