

ವಿಜಯಪುರ: ಅಂಗನವಾಡಿಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಗುಣಮಟ್ಟದ ಆಹಾರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ ಕಂಭಾಗಿ ಮಾತನಾಡಿ, ಇತ್ತೀಚೆಗೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಕೊಡುವ ಅಹಾರ ಕಳಪೆ ಗುಣಮಟ್ಟದ್ದಾಗಿರುವುದು ಕಂಡು ಬರುತ್ತಿದೆ. ಹಲವು ಗ್ರಾಮಗಳಲ್ಲಿ ಈ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಆಹಾರದ ಗುಣಮಟ್ಟದ ಬಗ್ಗೆ ಪರೀಕ್ಷೆಯಾಗಬೇಕು. ಕಳಪೆ ಆಹಾರ ವಿತರಿಸುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ ಮಾತನಾಡಿ, ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಕೆಲವೊಬ್ಬ ಶಿಕ್ಷಕರು ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತು ಸಂಬಳ ತೆಗೆದುಕೊಳ್ಳುವುದು ಕಂಡುಬರುತ್ತಿದೆ, ಕೆಲವೊಂದು ಶಿಕ್ಷಕರು ಶಿಕ್ಷಣ ವೃತ್ತಿಯನ್ನು ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು ಕಂಡುಬರುತ್ತಿದೆ. ಇದೇ ಕಾರಣಕ್ಕಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕುಸಿಯುತ್ತಿದೆ. ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂದರು.
ಮುರಾರ್ಜಿ ಶಾಲೆ, ಕಿತ್ತೂರಾಣಿ ಚೆನ್ನಮ್ಮ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಪ್ರಾಂಶುಪಾಲರು ವಾಸಿಸುತ್ತಿಲ್ಲವೆಂದು ಶಾಲೆಯಲ್ಲಿ ನಮ್ಮ ಮಕ್ಕಳು ಹಾಗೂ ಗ್ರಾಮಸ್ಥರು ತಿಳಿಸಿರುತ್ತಾರೆ. ಅಲ್ಲಿನ ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂದರು.
ಜಿಲ್ಲಾ ಉಪಾಧ್ಯಕ್ಷ ಗಿರೀಶ ಕಲಘಟಗಿ, ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇತ ಪಟ್ಟದ, ರಾಜ್ಯ ಸಮಿತಿ ಸದಸ್ಯ ಸಿದ್ದರಾಮ ಹಳ್ಳೂರ, ಮಹಾಂತೇಶ ಚಕ್ರವರ್ತಿ, ರಾಜುಗೌಡ ಬಿರಾದಾರ, ಬಸಲಿಂಗಪ್ಪ ಕಪಾಳೆ, ಸಂಗಯ್ಯ ಸಾರಂಗಮಠ, ಮಲ್ಲಯ್ಯ ಹಿರೇಮಠ, ಶೋಭಾ ಪಾಟೀಲ, ವಿರೇಶ ಬಾಗೇವಾಡಿ, ಪ್ರಭು ಮಂಕಣಿ, ಶ್ರೀಶೈಲ ಹಡಪದ, ಚಂದ್ರಶೇಖರ ಕಡಕೋಳ, ಸಿದ್ದು ತುಂಬಗಿ ಮತ್ತಿತರರಿದ್ದರು.