

ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಬಜಾರ್‌ನ ಕಾಂಕ್ರೀಟ್ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದಲ್ಲದೇ ರಸ್ತೆಗೆ ಮೋರಂ ಬದಲು ಮಣ್ಣು ಹಾಕಲಾಗುತ್ತಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಮತ್ತು ಸಾರ್ವಜನಿಕರು ಬುಧವಾರ ಕಾಮಗಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಅಂದಾಜು 1 ಕೋಟಿ ರೂ. ಅನುದಾನದ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಭೂಮಿಪೂಜೆ ನೆರವೇರಿಸಿ ಗುಣಮಟ್ಟದ ಕಾಮಗಾರಿಗೆ ಸೂಚಿಸಿದ್ದರು. ಮಳೆ ಹಿನ್ನೆಲೆಯಲ್ಲಿ ಕೆಲದಿನಗಳ ಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಪುನ ಕೆಲಸ ಆರಂಭಿಸಿದ್ದ ಗುತ್ತಿಗೆದಾರರು ರಸ್ತೆಗೆ ಕೆಂಪು ಮೋರಂ ಹಾಕುವ ಬದಲು ಹುಲ್ಲಿನಿಂದ ಕೂಡಿದ ಮಣ್ಣು ಹಾಕುತ್ತಿದ್ದಾರೆ. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಕೋಟಿ ರೂ. ವೆಚ್ಚದ ಕಾಮಗಾರಿ ಕ್ರಿಯಾ ಯೋಜನೆಯಂತೆ ನಡೆಯಬೇಕು. ಕಾಮಗಾರಿ ಕಳಪೆಯಾದರೆ ಕೆಲವೇ ತಿಂಗಳಲ್ಲಿ ರಸ್ತೆ ಹದಗೆಡುತ್ತದೆ. ಹೀಗಾಗಿ ಸಂಬಂಧಪಟ್ಟವರು ಈ ಬಗ್ಗೆ ಕಾಳಜಿವಹಿಸಬೇಕು ಎಂದು ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೊಂಚಿಗೇರಿಮಠ ಒತ್ತಾಯಿಸಿದರು.
ನಾಗರಾಜ ಚಿಂಚಲಿ, ಗಣೇಶ ಮೆಹರವಾಡೆ, ಶಿವಾನಂದ ಮೆಕ್ಕಿ, ದೇವಣ್ಣ ರೋಣದ, ಈಶ್ವರ ರೋಣದ, ಮಹೇಶ ಬಿ. ಇತರರು ರಸ್ತೆಗೆ ಹಾಕುತ್ತಿದ್ದ ಮಣ್ಣನ್ನು ವಾಪಸ್ ಕಳುಹಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ‘ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ. ಕಾಮಗಾರಿ ಗುಣಮಟ್ಟದ ಪರೀಕ್ಷೆ ಮತ್ತು ನಿಗಾವಹಿಸುವ ಬಗ್ಗೆ ಇಂಜಿನಿಯರ್‌ಗಳಿಗೆ ತಿಳಿಸಿದ್ದೇನೆ’ ಎಂದರು.