ವೈದ್ಯಕೀಯ ವಿಮೆ ಮಾಡಿಸದೆ ಪಾಲಿಕೆ ನಿರ್ಲಕ್ಷ್ಯಆರೋಪ

Digital Health
Published on

ಪರಿಶಿಷ್ಟ ಜಾತಿ, ವರ್ಗದವರು ಅನಾರೋಗ್ಯ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಲು ನೆರವಾಗುವಂತೆ ಪಾಲಿಕೆ ವೈದ್ಯಕೀಯ ವಿಮೆ ಮಾಡಿಸಬೇಕೆಂದು ಸರ್ಕಾರದ ಆದೇಶವಿದೆ. ಆದರೆ, ಇದನ್ನು ಮೈಸೂರು ಮಹಾ ನಗರಪಾಲಿಕೆ ಉಲ್ಲಂಘಿಸಿ, ಈ ಸೌಲಭ್ಯ ನಿರಾಕರಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಜಯಶಂಕರ್ ಶ್ಯಾಮ್ ಆರೋಪಿಸಿದರು.

ಆರೋಗ್ಯ ವಿಮೆ ಸೌಲಭ್ಯದ ಬಗ್ಗೆ ಪಾಲಿಕೆಯಲ್ಲಿ ವಿಚಾರಿಸಿದರೆ ನಮೂನೆಯನ್ನೇ ಸಿದ್ಧಪಡಿಸಿಲ್ಲ. ಸಿದ್ಧಪಡಿಸಲಾಗುತ್ತಿದೆ ಎಂದು ವರ್ಷಗಳ ಹಿಂದೆಯೇ ತಿಳಿಸಿ ಸುಮ್ಮನಾಗಿದ್ದಾರೆ. ಪರಿಶಿಷ್ಟ ಜಾತಿ, ವರ್ಗದಿಂದ ಆಯ್ಕೆಯಾದ ಪಾಲಿಕೆ ಸದಸ್ಯರು ಈ ಬಗ್ಗೆ ಧ್ವನಿಯೆತ್ತುತ್ತಿಲ್ಲ. ಈ ಸೌಲಭ್ಯ ನಿರಾಕರಿಸುವುದು ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಾಗುತ್ತದೆ. ಹೀಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಕೂಡಲೇ ಈ ಸೌಲಭ್ಯ ನೀಡಲು ಕ್ರಮ ಕೈಗೊಳ್ಳದಿದ್ದಲ್ಲಿ ಪಾಲಿಕೆ ಅಧಿಕಾರಿಗಳ ವಿರುದ್ಧ ಸಂಬಂಧಿಸಿದವರಿಗೆ ದೂರು ನೀಡಲಾಗುವುದೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ನಗರ ವ್ಯಾಪ್ತಿಯಲ್ಲಿರುವ ಬಡ ಪರಿಶಿಷ್ಟ ಜಾತಿ, ವರ್ಗದ ನಾಗರಿಕರಿಗೆ ಇತರ ಸೌಲಭ್ಯವನ್ನೂ ಪಾಲಿಕೆ ನೀಡುತ್ತಿಲ್ಲ. ಫಲಾನುಭವಿಗೆ ಒಮ್ಮೆ ಮಾತ್ರ ನೀಡಲಾಗುತ್ತದೆ ಎನ್ನುತ್ತಿದ್ದಾರೆ. ಒಂದು ವೇಳೆ ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಂಡು ಪಾಲಿಕೆಯಿಂದ ಏನಾದರೂ ನೆರವು ಪಡೆದಿದ್ದರೆ, ಅವರು ಮುಂದೆ ಸ್ವ ಉದ್ಯೋಗಕ್ಕಾಗಿ ನೆರವು ಕೇಳಿದಾಗ ನಿರಾಕರಿಸಲಾಗುತ್ತಿದೆ. ಹೀಗಾಗಿ ಈ ನಿಯಮ ಸಡಿಲಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜಣ್ಣ, ಸುರೇಶ್, ಸಿದ್ದಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net