ಬಳ್ಳಾರಿ: ಕಳೆದ ಕೆಲ ವರ್ಷಗಳಿಂದ ವಿವಾದಗಳಿಂದಲೇ ಸುದ್ದಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಈಗ ಅಂಕಪಟ್ಟಿಯ ಕಾಗದದ ಖರೀದಿಯಲ್ಲಿ ಅಕ್ರಮ ಎಸಗಿದ ಆರೋಪ ಬೆಳಕಿಗೆ ಬಂದಿದೆ.
ಇಲ್ಲಿನ ವಿಎಸ್‌ಕೆ ವಿವಿ ವ್ಯಾಪ್ತಿಗೆ ಒಳಪಡುವ ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ, ಬಿ.ಇಡಿ, ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದು ವರ್ಷದಿಂದ ವರ್ಷಕ್ಕೆ ಶುಲ್ಕವೂ ಹೆಚ್ಚಿಸುತ್ತಿದೆ. ಸದ್ಯ, ಈಗಾಗಲೇ ಬಿ.ಇಡಿ ಪರೀಕ್ಷೆಗಳು ಪೂರ್ಣಗೊಂಡಿದ್ದು ಫಲಿತಾಂಶಕ್ಕಾಗಿ ಪ್ರಶಿಕ್ಷಣಾರ್ಥಿಗಳು ಕಾಯುತ್ತಿದ್ದಾರೆ. ಪ್ರತಿ ವರ್ಷ ಪದವಿ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲು ವಿವಿಯು ಸರ್ಕಾರ ಸ್ವಾಮ್ಯದ ಎಂಎಸ್‌ಐಎಲ್‌ನಿಂದ ಅಂಕಪಟ್ಟಿಯ ಪೇಪರ್‌ಗಳು ಖರೀದಿಸಿ ಅಂಕಗಳು ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಆದರೆ, ಪ್ರಸ್ತಕ ಶೈಕ್ಷಣಿಕ ವರ್ಷ ಅಂಕಪಟ್ಟಿಯ ಒಂದು ಕಾಗದಕ್ಕೆ ನಿಗದಿತ ಬೆಲೆಯ ಹತ್ತರಷ್ಟು ರೂ. ಹಣ ನೀಡಿ ಖರೀದಿಸಿ ಅಕ್ರಮ ಎಸಗಿದ ಆರೋಪ ಕೇಳಿ ಬಂದಿದೆ. ಅಂದರೆ, ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಒಂದು ಅಂಕಪಟ್ಟಿಯ ಕಾಗದದ ಬೆಲೆ ಏಳ ರಿಂದ ಹತ್ತು ರೂ. ಇದೆ. ಆದರೆ, ಈಗ ವಿವಿಯು ಎಂಎಸ್‌ಐಎಲ್‌ನಿಂದ ಒಂದು ಅಂಕಪಟ್ಟಿಯ ಕಾಗದಕ್ಕೆ 77 ರೂ. ಅಧಿಕ ಹಣ ನೀಡಿ ಖರೀದಿಸಿ ವಂಚಿಸಲಾಗಿದೆ ಎಂಬ ಆರೋಪ ಬಲವಾಗಿದೆ. ಒಟ್ಟಾರೆ, ಮೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲು ಈ ವರ್ಷ ನಾಲ್ಕು ಲಕ್ಷಕ್ಕೂ ಅಧಿಕ ಅಂಕಪಟ್ಟಿಯ ಕಾಗದಗಳನ್ನು ಹತ್ತರಷ್ಟು ಹಣ ನೀಡಿ ಖರೀದಿಸಿ ಕೋಟ್ಯಾಂತರ ರೂ. ವಂಚಿಸಲಾಗಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿದವು. ಇದರಂತೆ ಕಳೆದ ಕೆಲ ವರ್ಷಗಳ ಹಿಂದೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿಯೂ 1.93 ರೂ. ಬೆಲೆಯ ಅಂಕಪಟ್ಟಿಯ ಕಾಗದವನ್ನು 36 ರೂ. ಎಂಎಸ್‌ಐಎಲ್‌ನಿಂದ ಖರೀದಿಸಿ ಅಧಿಕಾರಿಗಳು ಸಿಕ್ಕಿ ಹಾಕಿಕೊಂಡಿದ್ದರು. ಸದ್ಯ ಈಗ ನಡೆದಿರುವ ಅಕ್ರಮವನ್ನು ನಿಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿದೆ.
ತನಿಖೆ : ಕಳೆದ ಮೂರು ವರ್ಷ ರಾಜ್ಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳಲಾಗಿತ್ತು. ಆದ್ದರಿಂದ, ರಾಜ್ಯದ ಎಲ್ಲ ವಿವಿಗಳಿಗೆ ಎನ್‌ಇಪಿ ಪಠ್ಯಕ್ರಮ ಜತೆಯಲ್ಲಿಯೇ ದಾಖಲಾತಿ ಕೂಡ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ನಡೆದಿತ್ತು. ವಿಎಸ್‌ಕೆ ವಿವಿಯು ಯುಯುಸಿಎಂಎಸ್ ತಂತ್ರಜ್ಞಾನದಲ್ಲಿಯೇ ಫಲಿತಾಂಶ ಪ್ರಕಟಿಸಿ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ವಿವಿಯ ನೀಡಿದೆ. ಅದರಂತೆ ಇದರಲ್ಲಿಯೂ ಅಕ್ರಮ ಎಸಗಿದ್ದ ಆರೋಪ ಕಂಡು ಬಂದರೆ ತನಿಖೆ ನಡೆಸಲು ಕ್ರಮವಹಿಸಲಾಗುವುದು ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಇತ್ತೀಚಿಗೆ ಪ್ರಶಿಕ್ಷಣಾರ್ಥಿಗಳ ಫಲಿತಾಂಶ ಹೆಚ್ಚಿಸಲು ಕಳ್ಳಂಕ ನೀಡಿ ಕೆಲ ಬಿ.ಇಡಿ ಕಾಲೇಜಗಳು ಸಿಕ್ಕಿ ಬಿದ್ದು ವಿವಿಯಿಂದ ದಂಡ ಹಾಕಲಾಗಿತ್ತು.
ಕೋಟ್.. ವಿವಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಅಂಕಪಟ್ಟಿಯ ಕಾಗದದ ಖರೀದಿಸಿದ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಎಂಎಸ್‌ಐಎಲ್‌ಗೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಮರು ಉತ್ತರ ಬಂದ ಬಳಿಕ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸುವುದರ ಬಗ್ಗೆ ನಿರ್ಧಾರಿಸಲಾಗುವುದು.
- ಪ್ರೊ.ಎಂ.ಮುನಿರಾಜು, ಕುಲಪತಿ, ವಿಎಸ್‌ಕೆ, ವಿವಿ, ಬಳ್ಳಾರಿ.