

ಮೂಡಿಗೆರೆ: ಡಿ.15ರಂದು ನಡೆಯುವ ತಾಲೂಕು ಕೃಷಿಕ ಸಮಾಜದ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಾಗಿರುವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇತರೆ ಅಭ್ಯರ್ಥಿಗೆ ಅದೇ ವ್ಯಕ್ತಿಯನ್ನು ಅನುಮೋದಕರಾಗಿ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಮುಖಂಡರು ಕೃಷಿ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಮಂಜುನಾಥಗೌಡ ಮಾತನಾಡಿ, ತಾಲೂಕು ಕೃಷಿಕ ಸಮಾಜದ ಚುನಾವಣೆಯಲ್ಲಿ ಸ್ಪರ್ಧಿಸಲು ಡಿ.6 ವರೆಗೆ ನಾಮಪತ್ರ ಸಲ್ಲಿಸಲಾಗಿದೆ. ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗೆ ತಲಾ ಓರ್ವರಂತೆ ಸೂಚಕ ಮತ್ತು ಅನುಮೋದಕರ ಅಗತ್ಯವಿದೆ. ಇದುವರೆಗೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿದ್ದ ವ್ಯಕ್ತಿ ಹೆಸರು ಮತದಾರರ ಪಟ್ಟಿಯಲ್ಲಿ ತಪ್ಪಾಗಿದೆ. ಪಟ್ಟಿ ತಿದ್ದುಪಡಿಗೆ ನ.12ರವರೆಗೆ ಮಾತ್ರ ಅವಕಾಶವಿತ್ತು. ಈಗ ತಿದ್ದುಪಡಿ ಮಾಡುವಂತಿಲ್ಲ. ಆದರೂ ಅದೇ ವ್ಯಕ್ತಿಯನ್ನು ಅಧಿಕಾರಿಗಳು ಅಭ್ಯರ್ಥಿಯಾಗಿಯೂ ಹಾಗೂ ಬೇರೊಬ್ಬ ಅಭ್ಯರ್ಥಿಗೆ ಅನುಮೋದಕರಾಗಿ ಮಾಡಿ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರಿದರು.
ಈ ಬಗ್ಗೆ ಚುನಾವಣಾಧಿಕಾರಿಯನ್ನು ಪ್ರಶ್ನಿಸಿದರೆ ಹೆಸರು ತಪ್ಪಾಗಿರುವ ಅಭ್ಯರ್ಥಿಯಿಂದ ಪ್ರಮಾಣಪತ್ರ ಪಡೆದು ಮತದಾರರ ಪಟ್ಟಿ ಸರಿಪಡಿಸಲಾಗುವುದು ಎಂದು ಉತ್ತರ ನೀಡುತ್ತಿದ್ದಾರೆ. ಇನ್ನು ಹೆಸರು ಸರಿಪಡಿಸಲು ಅವಕಾಶವಿಲ್ಲ. ಅಧಿಕಾರಿ ಸುಳ್ಳು ಹೇಳುತ್ತಿದ್ದಾರೆ. ಹೆಸರು ತಪ್ಪಾಗಿರುವ ವ್ಯಕ್ತಿಯ ನಾಮಪತ್ರ ಹಾಗೂ ಅನುಮೋದನೆ ಮಾಡಿರುವ ಇನ್ನೋರ್ವ ವ್ಯಕ್ತಿಯ ನಾಮಪತ್ರ ತಿರಸ್ಕರಿಸಬೇಕು ಎಂದು ಚುನಾವಣಾಧಿಕಾರಿಗೆ ಮನವಿ ನೀಡಲು ಹೋದರೆ ಮನವಿ ಸ್ವೀಕರಿಸುವುದಿಲ್ಲ ಎಂದು ಉಡಾಫೆಯಿಂದ ಹೇಳುತ್ತಾರೆ. ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರನ್ನು ಕೈ ಬಿಡದೆ ಲೋಪವೆಸಗಿದ್ದಾರೆ. ಹಿಂದಿನ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಒಟ್ಟುಗೂಡಿ ಈ ರೀತಿ ಅಕ್ರಮ ಎಸಗಿದ್ದಾರೆ ಎಂದು ದೂರಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಬಿಳ್ಳೂರು ಗ್ರಾಮದ ಕೃಷಿಕ ಲಕ್ಷ್ಮಣಗೌಡ ಇದ್ದರು.