ಸಾರಕ್ಕಿಯಲ್ಲಿ 2 ಎಕರೆ ಸರ್ಕಾರಿ ಜಮೀನು ಕಬಳಿಕೆ ಆರೋಪ

sarrakki land
Published on

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಸಾರಕ್ಕಿ ಗ್ರಾಮಕ್ಕೆ ಸೇರಿದ 2 ಎಕರೆ ಸರ್ಕಾರಿ ಜಮೀನನ್ನು ಕೆಲ ಪ್ರಭಾವಿ ಮುಖಂಡರು ಬಿಬಿಎಂಪಿ ಅಧಿಕಾರಿಗಳ ಜತೆಗೂಡಿ ನಕಲಿ ದಾಖಲೆ ಬಳಸಿ ಕಬಳಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಈ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಸಾರಕ್ಕಿಯ ಸರ್ವೆ ನಂ. 73ರಲ್ಲಿ 13 ಎಕರೆ 32 ಗುಂಟೆ ವಿಸ್ತೀರ್ಣದಷ್ಟು ಸರ್ಕಾರಿ ಜಮೀನು ಇದೆ. ಈ ಪೈಕಿ ಕೆಲ ವರ್ಷಗಳ ಹಿಂದೆಯೇ ಅರೆ ಸರ್ಕಾರಿ ಸಂಸ್ಥೆಗಳಿಗೆ ಸ್ವತ್ತುಗಳನ್ನು ಮಂಜೂರು ಮಾಡಿ ಉಳಿದ 2 ಎಕರೆ ಜಮೀನನ್ನು ಉಳಿಸಿಕೊಳ್ಳಲಾಗಿತ್ತು. ಈ ಬಗ್ಗೆ 1997-98ರಲ್ಲಿ ಅಂದಿನ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಆಗಿದ್ದ ರಾಮೇಗೌಡ ಅವರು ಸದರಿ ಸರ್ಕಾರಿ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ಮಾಡಿದ್ದ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿತ್ತು. ಆದರೀಗ ಮತ್ತೆ ಕೆಲ ನೆಲಗಳ್ಳರು ರಾಜಕೀಯ ಪ್ರಭಾವ ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 2 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಭೂಕಬಳಿಕೆಗೆ ಅನ್ಯ ಸ್ವತ್ತಿನ ದಾಖಲೆ ಬಳಕೆ:

ಕಬಳಿಕೆ ಮಾಡಿರುವ ಸರ್ಕಾರಿ ಜಾಗಕ್ಕೆ ಗೌರಿಶಂಕರ್ ಎಂಬುವವರ ಹೆಸರಿಗೆ ಪಾಲಿಕೆಯ ಜೆ.ಪಿ.ನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಿಂದ ಕಾನೂನು ಬಾಹಿರವಾಗಿ ಖಾತಾ ಮಾಡಿಕೊಡಲಾಗಿದೆ. ಸದರಿ ಸಾರಕ್ಕಿ ಗ್ರಾಮದ ಸರ್ವೆ ನಂ. 73ರ ಸರ್ಕಾರಿ ಜಮೀನು ಶಾಕಾಂಬರಿನಗರಕ್ಕೆ (ವಾರ್ಡ್ ಸಂಖ್ಯೆ 179) ಒಳಪಟ್ಟಿದೆ. ಆದರೆ, ಪಾಲಿಕೆಯ ಕಂದಾಯ ವಿಭಾಗದ ಕೆಲ ಅಧಿಕಾರಿಗಳು ಭೂಕಬಳಿಕೆದಾರರೊಂದಿಗೆ ಶಾಮೀಲಾಗಿ ಜೆ.ಪಿ.ನಗರ ವಾರ್ಡ್ (ವಾರ್ಡ್ ಸಂಖ್ಯೆ 177) ವ್ಯಾಪ್ತಿಯ ಸ್ವತ್ತಿನ ಸಂಖ್ಯೆಯೊಂದನ್ನು ಬಳಸಿ ಹೊಸದಾಗಿ ಖಾತಾ ಮಾಡಿ ಅದನ್ನೇ ಮಂಜೂರಾತಿ ಪತ್ರವನ್ನಾಗಿ ನೀಡಲಾಗಿದೆ. ಈ ಬಗ್ಗೆ ದಾಖಲೆ ಬದಲಾಗಿರುವ ವಿಷಯವನ್ನು ನೈಜ ಸ್ವತ್ತಿಗೆ ಹೊಂದಿಕೊಂಡಿರುವ ನವೋದಯ ಬಡಾವಣೆಯ ನಿವಾಸಿಗಳು ಹಲವು ಬಾರಿ ಪಾಲಿಕೆ ಗಮನಕ್ಕೆ ತಂದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಈಗ ದಾಖಲೆಗಳನ್ನು ಸಂಗ್ರಹಿಸಿ ಸ್ವತ್ತು ಕಬಳಿಕೆ ಆಗಿರುವುದನ್ನು ನಗರ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಎನ್.ಆರ್.ರಮೇಶ್ ತಿಳಿಸಿದ್ದಾರೆ.

ಸಾರಕ್ಕಿ ಗ್ರಾಮಕ್ಕೆ ಸೇರಿದ ಸರ್ಕಾರಿ ಜಮೀನಿಗೆ ಬೇರೊಂದು ಸ್ವತ್ತಿನ ದಾಖಲೆ ಬಳಸಿ ನಕಲಿ ಮಾಡಿರುವುದನ್ನು ಪಾಲಿಕೆಗೆ ತಿಳಿಸಿದ್ದರೂ, ಸರ್ಕಾರಿ ಜಮೀನು ಉಳಿಸಲು ಮುಂದಾಗಿಲ್ಲ. ಈಗಲಾದರೂ ಕಾನೂನುಬಾಹಿರವಾಗಿ ಖಾತಾ ಮಾಡಿಕೊಟ್ಟಿರುವುದನ್ನು ರದ್ದುಪಡಿಸಿ ಸ್ವತ್ತನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ನೆಲಗಳ್ಳರ ಜತೆ ಕೈಜೋಡಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಿಎಂ ಹಾಗೂ ಕಂದಾಯ ಸಚಿವರಿಗೂ ದೂರು ಸಲ್ಲಿಸಲಾಗುವುದು.

- ಎನ್.ಆರ್.ರಮೇಶ್, ಬಿಜೆಪಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net