ನಕಲಿ ದಾಖಲೆ ಸೃಷ್ಟಿ ಆರೋಪ : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಪ್ರಕರಣ ದಾಖಲು

Siddaramaiah
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ಸುಳ್ಳು ದಾಖಲೆ ಸೃಷ್ಟಿ ಹಾಗೂ ಕಡತದಲ್ಲಿದ್ದ ನೈಜ ದಾಖಲೆ ನಾಶ ಪಡಿಸಿ ಆ ಜಾಗದಲ್ಲಿ ಸುಳ್ಳು ದಾಖಲೆಗಳನ್ನು ಪಾರ್ವತಿ ಹಾಗೂ ಎಂ. ಲಕ್ಷ್ಮಣ್ ಸೇರಿಸಿದ್ದು, ಇವರಿಗೆ ಕೆಲವರು ಸಹಕಾರ ನೀಡಿದ್ದಾರೆ. ಇವರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರು ಅರ್ಜಿಯನ್ನು ಪೊಲೀಸರು ಸ್ವೀಕರಿಸಿದ್ದು, ಇದುವರೆಗೆ ಎಫ್‌ಐಆರ್ ದಾಖಲಿಸಿಲ್ಲ.

ದೂರಿನಲ್ಲೇನಿದೆ?: ಮುಡಾದಲ್ಲಿ ಪಾರ್ವತಿ ಬದಲಿ ನಿವೇಶನಕ್ಕೆ ಕೋರಿ ಸಲ್ಲಿಸಿರುವ ಅರ್ಜಿಗೆ ವೈಟರ್ ಹಾಕಲಾಗಿದ್ದು, ಈ ವಿಚಾರ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆಯಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಲು 26-8-24 ರಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ದಾಖಲೆಯ ವಿಡಿಯೋ ತುಣುಕು ಬಿಟ್ಟಿದ್ದರು. ಅಲ್ಲದೆ, ಮುಡಾ ಹಗರಣ ವಿಚಾರವಾಗಿ ಸಿದ್ದರಾಮಯ್ಯ 26-7-24 ರಂದು ಸುದ್ದಿಗೋಷ್ಠಿ ನಡೆಸಿ ಪಾರ್ವತಿ ಮುಡಾಗೆ 23-6-14 ರಂದು ಬರೆದ ಪತ್ರವನ್ನು ಬಿಡುಗಡೆ ಮಾಡಿದ್ದರು. ವಿಡಿಯೋದಲ್ಲಿ ಕಂಡು ಬರುವ ಪತ್ರದಲ್ಲಿರುವ ಸಹಿಗೂ, ಪಾರ್ವತಿ ಮುಡಾಗೆ ಬರೆದ ಪತ್ರದ ಸಹಿಗೂ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತಿದೆ. ಅಲ್ಲದೆ ಮೂಲ ಅರ್ಜಿಗೂ ಸಿದ್ದರಾಮಯ್ಯ ವಿಡಿಯೋದಲ್ಲಿ ಬಿಡುಗಡೆ ಮಾಡಿರುವ ಅರ್ಜಿಗೂ ಒಟ್ಟು ಒಂಬತ್ತು ವ್ಯತ್ಯಾಸಗಳು ಕಂಡು ಬರುತ್ತಿದೆ.

ಈ ವ್ಯತ್ಯಾಸಗಳನ್ನು ಗಮನಿಸಿದರೆ ನೈಜ ದಾಖಲೆಯ ಬದಲಿಗೆ ಬೇರೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಕಂಡು ಬರುತ್ತದೆ. ಸಿದ್ದರಾಮಯ್ಯ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರ ಧ್ವನಿ ಇದೆ. ಬಹುಶಃ ನನಗಿರುವ ಅನುಮಾನದ ಪ್ರಕಾರ ಪಾರ್ವತಿ ಮುಡಾಗೆ 23-6-14 ರಂದು ಬರೆದಿದ್ದ ಪತ್ರದಲ್ಲಿ ‘ವಿಜಯನಗರ ಬಡಾವಣೆಯಲ್ಲಿ ನಿವೇಶನ ನೀಡಿ’ ಎಂದು ಮನವಿ ಮಾಡಿದ್ದರು. ಈ ಸತ್ಯಾಂಶ ಮರೆಮಾಚಲು ವೈಟ್ನರ್ ಹಾಕಲಾಗಿತ್ತು. ತನಿಖೆ ಸಂದರ್ಭ ಈ ಸತ್ಯಾಂಶ ಹೊರ ಬರುವ ಭೀತಿಯಲ್ಲಿ ಇದೀಗ ಎಂ. ಲಕ್ಷ್ಮಣ ಹಾಗೂ ಪಾರ್ವತಿ ಸಂಚು ರೂಪಿಸಿ ಹೊಸದಾಗಿ ಸುಳ್ಳು ಪತ್ರವನ್ನು ಸೃಷ್ಟಿಸಿ 23-6-14 ರಂದು ಪಾರ್ವತಿ ಮುಡಾಗೆ ಬರೆದಿದ್ದ ಮೂಲ ಪತ್ರವನ್ನು ನಾಶ ಪಡಿಸಿರುವ ಸಾಧ್ಯತೆ ಇದೆ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net