

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಎಣ್ಮಕಜೆ ಗ್ರಾಮದ ವಿವಿಧ ಪ್ರದೇಶದಲ್ಲಿ ಅನರ್ಹರಿಗೆ ಜಾಗ ಮಂಜೂರುಗೊಳಿಸುವ ವ್ಯವಸ್ಥಿತ ಸಂಚಿನ ವಿರುದ್ಧ ನಾಗರಿಕರು ಶನಿವಾರ ಅಧಿಕಾರಿಗಳ ಮುಂದೆ ತಮ್ಮ ಮುನಿಸು ಪ್ರದರ್ಶಿಸಿದ್ದಾರೆ.
ಭೂರಹಿತ ಬಡ ಜನತೆಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಹಂಚಿಕೆ ಮಾಡುತ್ತಿರುವ ಭೂಮಿಯನ್ನು ಫಲಾನುಭವಿಗಳಿಗೆ ನೀಡದೆ, ಏಜೆಂಟ್ಗಳ ಮೂಲಕ ಅನರ್ಹರಿಗೆ ವಿತರಿಸುತ್ತಿರುವುದಾಗಿ ಆರೋಪ ಕೇಳಿಬರುತ್ತಿದೆ. 20 ವರ್ಷಗಳಿಂದ ಭೂಮಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಜನತೆಗೆ ಭೂಮಿ ಮಂಜೂರುಗೊಳಿಸದೆ, ಹಣ ಪಡೆದು ಇಂತಹ ಜಾಗವನ್ನು ಯಾರ್ಯಾರಿಗೋ ಹಂಚಿಕೆ ಮಾಡಲಾಗುತ್ತಿದೆ. ಇದರಿಂದ ಭೂಮಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಜನರು ಸಿಟ್ಟಿಗೆದ್ದು, ಉಪ್ಪಳದಲ್ಲಿ ಕಾರ್ಯಾಚರಿಸುವ ಮಂಜೇಶ್ವರ ತಾಲೂಕು ಕಚೇರಿಗೆ ತೆರಳಿ, ಲ್ಯಾಂಡ್ ಅಸೈನ್ಮೆಂಟ್ ಸಭೆ ವೇಳೆ ಅಸಮಾಧಾನ ಹೊರಹಾಕಿದ್ದಾರೆ.
ಎಣ್ಮಕಜೆ ಗ್ರಾಮಾಧಿಕಾರಿ ಕಚೇರಿಯ ಕೆಲವು ಅಧಿಕಾರಿಗಳು-ಏಜೆಂಟ್ಗಳು ಸೇರಿಕೊಂಡು, ಲಕ್ಷಾಂತರ ರೂ. ಲಂಚ ಪಡೆದು ದೂರದ ಊರಿನವರಿಗೆ ಇಲ್ಲಿನ ಜಾಗ ಅಳೆದು ಹಕ್ಕುಪತ್ರ ಮಾಡಿ ಕೊಡುತ್ತಿದ್ದಾರೆ. ಎಣ್ಮಕಜೆಯ ಉಕ್ಕಿನಡ್ಕ, ಅಮೆಕ್ಕಳ, ಕುರೆಡ್ಕ, ಬೆಂಗಪದವು, ಬಜಕೂಡ್ಲು, ಖಂಡಿಗೆ ಪ್ರದೇಶಗಳಲ್ಲಿ ಈ ರೀತಿ ಸರ್ಕಾರಿ ಜಾಗವನ್ನು ಲಂಚ ಪಡೆದು ಅನರ್ಹರಿಗೆ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಉಕ್ಕಿನಡ್ಕದಲ್ಲಿ ಕಳೆದ ಹಲವು ವರ್ಷಗಳಿಂದ ಗುಡಿಸಲು ಕಟ್ಟಿ ವಾಸ್ತವ್ಯ ಹೂಡಿದ್ದು, ನ್ಯಾಯಾಲಯದ ವ್ಯಾಜ್ಯ ಎದುರಿಸುತ್ತಿರುವ ಬಡ ಕುಟುಂಬಗಳ ಭೂಮಿಯನ್ನು ಕೆಲವು ಅಧಿಕಾರಿಗಳು ಹಣ ಪಡೆದು ಬೇರೆಯವರಿಗೆ ಅಳೆದು ನೀಡುತ್ತಿದ್ದಾರೆ. ಹನ್ನೆರಡು ವರ್ಷಗಳಿಂದ ಉಕ್ಕಿನಡ್ಕದಲ್ಲಿ ವಾಸ್ತವ್ಯ ಹೂಡಿರುವ ಮಹಿಳೆಯೊಬ್ಬರು ಹಕ್ಕುಪತ್ರಕ್ಕಾಗಿ ಇನ್ನೂ ಕಚೇರಿ ಅಲೆದಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಣ್ಮಕಜೆ ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಹಂಚಿಕೆ ಮಾಡಿರುವ ಭೂಮಿಯ ಬಗ್ಗೆ ಅವಲೋಕನ ನಡೆಸಿ, ಜಿಲ್ಲಾಧಿಕಾರಿಗೂ ಮಾಹಿತಿ ನೀಡಲಾಗುವುದು. ಭೂಮಿ ಹಂಚಿಕೆ ವಿಚಾರದಲ್ಲಿ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿ, ಫಲಾನುಭವಿಗಳಿಗೆ ಭೂಮಿ ಹಂಚಿಕೆ ನಡೆಸುವ ಬಗ್ಗೆ ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕು. ಅರ್ಹರಿಗೆ ಭೂಮಿ ಲಭ್ಯವಾಗಿಸುವ ಬಗ್ಗೆ ಅಧಿಕಾರಿಗಳು ಸಕಾರಾತ್ಮಕ ಕ್ರಮ ಕೈಗೊಳ್ಳಬೇಕು. - ಎ.ಕೆ.ಎಂ. ಅಶ್ರಫ್, ಶಾಸಕ ಮಂಜೇಶ್ವರ https://www.vijayavani.net/clearance-of-dangerous-trees-from-highway-sides https://www.vijayavani.net/dead-body-found-in-stream