ಜಿಪಂ ಸಿಇಒ ಸಹಿ ನಕಲು ಮಾಡಿದ ಆರೋಪ

fraud
Published on

* ನರೇಗಾ ವಿಭಾಗದ ಪ್ರಥಮ ದರ್ಜೆ ಸಹಾಯಕನ ಮೇಲೆ ದೂರು ದಾಖಲು

ರಾಮನಗರ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹಿಯನ್ನು ನಕಲು ಮಾಡಿ ನರೇಗಾ ವಿಭಾಗಕ್ಕೆ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಪ್ರಕರಣ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಜಿಪಂ ಸಿಇಒ ಕಚೇರಿಯ ಯೋಜನಾ ನಿರ್ದೇಶಕ ಎಚ್.ಎನ್ ಮಂಜುನಾಥ ಸ್ವಾಮಿ ಎನ್ನುವವರು ನರೇಗಾ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಚ್. ಎಂ. ಅಭಿಷೇಕ್ ಎನ್ನುವರ ವಿರುದ್ಧ ರಾಮನಗರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಏನಿದು ಘಟನೆ?

ಮಹಾತ್ಮಗಾಂಧಿ ನರೇಗಾ ಯೋಜನೆಯ ಸಮರ್ಪಕ ಸಮರ್ಪಕ ಅನುಷ್ಠಾನಕ್ಕಾಗಿ ತಾಂತ್ರಿಕ ಸಹಾಯಕ ಅಭಿಯಂತರರನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಲಾಗಿದೆ. ಆದರೆ, ಜಿಪಂನ ನರೇಗಾ ಶಾಖೆಯಲ್ಲಿ ವಿಷಯ ನಿರ್ವಾಹಕರಾಗಿರುವ ಪ್ರಥಮ ದರ್ಜೆ ಸಹಾಯಕ ಅಭಿಷೇಕ್, ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಅಭಿಯಂತರ ಹುದ್ದೆಗೆ ಆಯ್ಕೆಯಾಗಿದ್ದವರಿಗೆ ಅಧಿಕೃತ ನೇಮಕಕ್ಕೂ ಮುಂಚಿತವಾಗಿ ನಕಲಿ ಆದೇಶ ಪತ್ರ ನೀಡಿದ್ದಾರೆ.

ಅಲ್ಲದೆ, ನೇಮಕ ಪ್ರಾಧಿಕಾರಿಯಾದ ಸಿಇಒ ಆದೇಶಕ್ಕೂ ಮೊದಲೇ ಕಚೇರಿ ಟಿಪ್ಪಣಿ ಸಿದ್ಧಪಡಿಸಿ, ಕಚೇರಿ ಅಧೀಕ್ಷಕರು, ಸಹಾಯಕ ಯೋಜನಾ ಅಧಿಕಾರಿ, ಯೋಜನಾ ನಿರ್ದೇಶಕರ ಷರಾದೊಂದಿಗೆ 2024ರ ಆ.26ರಂದು ಇನ್‌ವೆನ್‌ಸಿಸ್ಟ್ ಟೆಕ್ನಾಲಜಿಸ್ ಕಂಪನಿಗೆ ನರೇಗಾ ಅನುಷ್ಠಾನಕ್ಕೆ ಇವರನ್ನು ಚನ್ನಪಟ್ಟಣ ತಾಲೂಕಿಗೆ ತಾಂತ್ರಿಕ ಸಹಾಯಕ ಅಭಿಯಂತರಾಗಿ ನಿಯೋಜಿಸುವಂತೆ ಆದೇಶ ಹೊರಡಿಸಿರುವ ರೀತಿ, ಸುಳ್ಳು ಆದೇಶ ಪತ್ರವನ್ನು ಸೃಷ್ಟಿ ಮಾಡಿದ್ದಾರೆ. ಸಿಇಒ ಸಹಿಯುಳ್ಳ ಬೇರೊಂದು ಪತ್ರಕ್ಕೆ, ಆತ ಸೃಷ್ಟಿಸಿದ್ದ ಸುಳ್ಳು ಆದೇಶದ ಮಾಹಿತಿ ಪತ್ರವನ್ನು ಜೆರಾಕ್ಸ್ ಮೂಲಕ ಜೋಡಿಸಿ ನಕಲಿ ಆದೇಶ ಹೊರಡಿಸುವ ಮೂಲಕ ಸಿಇಒ ಸಹಿಯುಳ್ಳ ಪತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net