

ಕಂಪ್ಲಿ: ಮೊಹರಂ ಹಬ್ಬದ ಅಲಾಯಿ ಕುಣಿಗಾಗಿ ಮರ-ಗಿಡಗಳನ್ನು ಕಡಿಯಬಾರದು. ಡಿಪೋದಿಂದ ಕಟ್ಟಿಗೆ ಖರೀದಿಸಿ ಅಲಾಯಿ ಕುಣಿಗೆ ಒದಗಿಸಬೇಕು ಎಂದು ಬಳ್ಳಾರಿಯ ಲೋಕಾಯುಕ್ತ ನಿರೀಕ್ಷಕ ಮಹಮ್ಮದ್ ರಫಿ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಲಾಯಿ ಕುಣಿಗಾಗಿ ಮರಗಳನ್ನು ಕಡಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಡಿಸಿಗೆ ಪತ್ರ ಬರೆಯಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಿದಲ್ಲಿ ಪರಿಸರ ಉಳಿಸಲು ಸಾಧ್ಯ.
ರಸ್ತೆ ಬದಿ ಗಿಡಗಳನ್ನು ಬೆಳೆಸಬೇಕು. ಕಂಪ್ಲಿಯಲ್ಲಿ ಅರಣ್ಯ ಇಲಾಖೆ ಪರಿಸರ ದಿನ ಆಚರಿಸಲು ಇಚ್ಛಾಶಕ್ತಿ ತೋರಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಡಿಆರ್‌ಇ ಪರಶುರಾಮ, ಡಿಆರ್‌ಒ ಪ್ರಕಾಶ್ ಅವರನ್ನು ರಫಿ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಯಾವುದೇ ಹೊಸ ಅರ್ಜಿ ಸ್ವೀಕಾರಗೊಳ್ಳಲಿಲ್ಲ. ಬಾಕಿಯಿದ್ದ ಹಳೆಯ ಅರ್ಜಿಗಳ ಅನುಪಾಲನೆ ಕುರಿತು ಚರ್ಚಿಸಲಾಯಿತು. ಸೋಮಪ್ಪ ಕೆರೆ ಒತ್ತುವರಿ ತೆರವುಗೊಳಿಸುವುದು, ಗ್ಯಾಸ್ ಗೋಡನ್ ಸ್ಥಳಾಂತರ, ಉಗ್ರಾಣ ಸಿಬ್ಬಂದಿಯ ಎಂಟು ತಿಂಗಳ ಸಂಬಳ ಬಾಕಿ, ಗೌರಮ್ಮ ಕೆರೆ ಒತ್ತುವರಿ ತೆರವು, ಸೋಮಪ್ಪ ಕೆರೆ ದಡದಲ್ಲಿ ವಾಸವಾಗಿದ್ದು ತೆರವುಗೊಳಿಸಿದ ಮಹಿಳೆಗೆ ನಿವೇಶನ ಹಂಚಿಕೆ ಅರ್ಜಿಗಳ ಕುರಿತು ಚರ್ಚಿಸಲಾಯಿತು.
ತಹಸೀಲ್ದಾರ್ ಶಿವರಾಜ, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳಿ, ಅಧಿಕಾರಿಗಳಾದ ಡಾ.ಜಿ.ಅರುಣ್, ಜಿ.ವೀರೇಶ್, ಅನುಮಪ, ಎಂ.ಪಿ.ಮಹಾಂತೇಶ, ಕೆ.ವಿರೂಪಾಕ್ಷಪ್ಪ, ಲತೀಫಾ ಬೇಗಮ್ ಇತರರಿದ್ದರು.