ನವೆಂಬರ್ 11 ರಿಂದ ಆಲಮಟ್ಟಿಯಲ್ಲಿ ರಾಜ್ಯಮಟ್ಟದ ಖೋಖೋ ಪಂದ್ಯಾವಳಿ

Allamatti, Khokho Tournament, Department of Education, BEO, Chandrasekhara Nuggali, Vasant Rathoda, Belgaum, North Karnataka Style Meals,
ಆಲಮಟ್ಟಿಯಲ್ಲಿ ರಾಜ್ಯಮಟ್ಟದ ಖೋಖೋ ಪಂದ್ಯಾವಳಿ ಕುರಿತ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಮುಖಂಡರು, ಅಧಿಕಾರಿಗಳು. ವಸಂತ ರಾಠೋಡ, ಚಂದ್ರಶೇಖರ ನುಗ್ಗಲಿ, ಎಸ್.ಎಸ್. ಅವಟಿ, ಎಸ್.ಎಚ್. ಬಿರಾದಾರ ಇತರರಿದ್ದರು.
Published on

ಆಲಮಟ್ಟಿ: ಆಲಮಟ್ಟಿ ಡ್ಯಾಂ ಸೈಟ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ- ಪ್ರೌಢಶಾಲಾ ವಿಭಾಗದ ಬೆಳಗಾವಿ ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನವೆಂಬರ್ 11 ರಿಂದ ನಾಲ್ಕು ದಿನ ಜರುಗಲಿವೆ ಎಂದು ಬಿಇಒ ವಸಂತ ರಾಠೋಡ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.

ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಾಲ್ಕು ಖೋಖೋ ಸ್ಪರ್ಧೆಗಳು ಏಕಕಾಲದಲ್ಲಿಯೇ ಜರುಗುವಂತೆ ನಾಲ್ಕು ಖೋಖೋ ಮೈದಾನ ನಿರ್ಮಿಸಲಾಗುತ್ತಿದೆ. ಕ್ರೀಡಾಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ನಾಲ್ಕು ಕಡೆ ಎಲ್ಇಡಿ ಪರದೆಗಳ ಮೂಲಕ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನ.11 ರಂದು ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ (14 ವಯಸ್ಸಿನ ಒಳಗಿನ) ಬಾಲಕ, ಬಾಲಕಿಯರ ಖೋಖೋ ತಂಡಗಳ ನೋಂದಣಿ, ನ.12 ರಂದು ಖೋಖೋ ಸ್ಪರ್ಧೆಗಳು ನಡೆಯಲಿವೆ. ನ.13 ರಂದು ರಾಜ್ಯ ಮಟ್ಟದ ಪ್ರಾಥಮಿಕ (14 ವಯೋಮಾನ ಒಳಗಿನ) ಹಾಗೂ ಪ್ರೌಢಶಾಲೆ (17 ವಯೋಮಾನ ಒಳಗಿನ) ಬಾಲಕ/ ಬಾಲಕಿಯರ ಖೋಖೋ ತಂಡಗಳ ನೋಂದಣಿ ಜರುಗಲಿದೆ. ಅದೇ ದಿನ ಸಂಜೆ ರಾಜ್ಯ ಮಟ್ಟದ ಪಂದ್ಯಾವಳಿಗಳ ಉದ್ಘಾಟನೆ ಜರುಗಲಿದೆ. ನ.14 ರಂದು ಖೋಖೋ ಸ್ಪರ್ಧೆಗಳು ಜರುಗಲಿವೆ ಎಂದರು.

ಬೆಳಗಾವಿ ವಿಭಾಗ ಮಟ್ಟದ 9 ಜಿಲ್ಲೆಗಳ ತಲಾ ಎರಡು ತಂಡಗಳಂತೆ 18 ತಂಡಗಳು ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗೆ ನಾಲ್ಕು ವಿಭಾಗಗಳಿಂದ ತಲಾ 4 ರಂತೆ 16 ತಂಡಗಳು ಸೇರಿ ಸುಮಾರು 620 ಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಲಿದ್ದಾರೆ ಎಂದರು.

ಉತ್ತರ ಕರ್ನಾಟಕ ಶೈಲಿಯ ಊಟ: ನಾಲ್ಕು ದಿನ ಕ್ರೀಡಾಪಟುಗಳಿಗೆ ಉತ್ತರ ಕರ್ನಾಟಕ ಶೈಲಿಯ ರುಚಿಕಟ್ಟಾದ ನಿತ್ಯವೂ ಬೇರೆ, ಬೇರೆ ರೀತಿಯ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಪಂದ್ಯಾವಳಿ ವೀಕ್ಷಿಸಲು ಆಗಮಿಸುವ ಕ್ರೀಡಾಭಿಮಾನಿಗಳಿಗೂ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.

ಖೋಖೋ ಪಂದ್ಯಾವಳಿಗಳ ಯಶಸ್ವಿಗೆ ನಾನಾ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಆಲಮಟ್ಟಿ ಸುತ್ತಮುತ್ತಲಿನ ಉದ್ಯಾನಗಳನ್ನು ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್. ಅವಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಚ್. ಬಿರಾದಾರ, ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ, ಬಸವರಾಜ ಯರವಿನತೆಲಿಮಠ, ಎಂ.ಆರ್. ಮಕಾನದಾರ, ಎಂ.ಎಂ. ಮುಲ್ಲಾ, ಸಲೀಂ ದಡೆದ, ಆರ್.ಬಿ.ಗೌಡರ, ವಿ.ಕೆ.ಮಸೂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net