

ನರಗುಂದ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಪ್ ತಿದ್ದುಪಡಿ ಮಸೂದೆ ವಿರೋಧಿಸಿ ಪಟ್ಟಣದಲ್ಲಿ ವಿವಿಧ ಮುಸ್ಲಿಂ ಸಂಘಟನೆ ಪದಾಧಿಕಾರಿಗಳು, ಧರ್ಮ ಗುರುಗಳು, ನೂರಾರು ಮಹಿಳೆಯರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೃಹತ್ ಪ್ರತಿಭಟನಾ ಮೆರವಣೆಗೆ ನಡೆಸಿ, ತಹಸೀಲ್ದಾರ್ ಶ್ರೀಶೈಲ ತಳವಾರ ಅವರ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತೆ ಯಾಸ್ಮೀನಬಾನು ಮಾತನಾಡಿ, ವಕ್ಪ್ ಕಾಯ್ದೆ ಜಾತ್ಯಾತೀತ ರಾಷ್ಟ್ರದ ಮೌಲ್ಯ, ಜನಸಾಮಾನ್ಯರ ತತ್ವ, ದೇಶದ ಸ್ಥಿರ ಕಾನೂನುಗಳಿಗೆ ತದ್ವಿರುದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಣ್ಣುಗಳು ಅಲ್ಲಾಹನ ವಕ್ಪ್ ಆಸ್ತಿ ಮೇಲೆ ಬಿದ್ದಿದ್ದರಿಂದ ಹಿಜಾಬ್ ನಿಷೇಧ, ಎನ್ಆರ್ಸಿ, ಸಿಎಎ, ತ್ರಿವಳಿ ತಲಾಕ್ ರದ್ದತಿ ಬಳಿಕ ವಕ್ಪ್ ಕಾಯ್ದೆಗೆ ತಿದ್ದುಪಡಿ ತಂದು ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ಹೊರಗಡೆ ಬರುವಂತೆ ಮಾಡಿದ್ದಾರೆ. ನಮಗೆ ರಾಜಕಾರಣಿಗಳ ಕಾಲು ಮುಗಿಯುವ ಅನಿವಾರ್ಯತೆ ಬಂದಿಲ್ಲ. ನಮಗೆ ಅಲ್ಲಾಹನ ಮೇಲೆ ನಂಬಿಕೆಯಿದೆ. ನಾವು ತಪ್ಪು ಮಾಡಿದ್ದರೆ ಅವುಗಳನ್ನು ತಡೆಯಲು (ಅಲ್ಲಾ) ದೇವರಿದ್ದಾನೆ. ಇದನ್ನು ನಿಯಂತ್ರಿಸಲು ನೀವ್ಯಾರು ಎಂದರು.
ಬಿಲ್ಕೀಸ್ಭಾನು ಅತ್ಯಾಚಾರಿಗಳನ್ನು ಅದ್ದೂರಿಯಿಂದ ಮಾಲಾರ್ಪಣೆಗೈದು ಸ್ವಾಗತಿಸಲಾಗಿದೆ. ಮಣಿಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರನ್ನು ಸೌಜನ್ಯಕ್ಕೂ ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ. ಇಂಥವರಿಂದ ಮುಸ್ಲಿಂ ಸಮಾಜದ ಮಹಿಳೆಯರ ರಕ್ಷಣೆ ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಬ್ರಿ ಮಸೀದಿ ಬಿಟ್ಟುಕೊಟ್ಟಿದ್ದರಿಂದ ಮೋದಿ ಸಂಘ ಪರಿವಾರದವರ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ. ಹುಟ್ಟಿದ ಮೇಲೆ ಸಾವು ಎಲ್ಲರಿಗೂ ಗ್ಯಾರಂಟಿ ಆಗಿರುತ್ತದೆ. ಮುಸ್ಲಿಂಮರು ದೇಶದ ಕಾನೂನಿಗೆ ಗೌರವ ಕೊಡುತ್ತೇವೆ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ನರಗುಂದದ ಸಮೀರ ಶಹಾಪೂರ ಕೊಲೆಯಿಂದ ಭಯ ಹುಟ್ಟಿದೆ ಅಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನದ ಪರಮಾವಧಿ. ಸರ್ವಾಧಿಕಾರಿ ಧೋರಣೆ ಕೈಬಿಡದಿದ್ದರೆ ನೀವು ಜನರ ಕೆಂಗಣ್ಣಿಗೆ ಗುರಿಯಾಗಿ ದಂಗೆ ಎದ್ದು ರಕ್ತಪಾತ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿ.ಐ. ಚೌಧರಿ, ಪುರಸಭೆ ಮಾಜಿ ಅಧ್ಯಕ್ಷ ಸಿಕಂದರ ಪಠಾಣ ಮಾತನಾಡಿದರು.
ವಕ್ಪ್ ಕಮಿಟಿ ಸದಸ್ಯ ಕೆ.ಬಿ. ಖಲೀಫ, ಹಾಫೀಜ್ ಇಬ್ರಾಹಿಂ, ರಂಜಾನಸಾಬ ನದಾಫ್, ಅಕ್ಬರಬೇಗ್ ಮುಲ್ಲಾ, ಅನ್ವರ ಬಾಗೇವಾಡಿ ಮಾತನಾಡಿದರು. ಎಚ್.ಎಂ. ಪಾಣಿಗಟ್ಟಿ, ಡಿ.ಎಂ. ನಾಯ್ಕರ, ಹಯಾಜ್ಖಾನ್ ಪಠಾಣ, ದಾವಲ ರಾಜೇಖಾನ್, ಮೌಲಾಸಾಬ ಜಮಾದಾರ, ಎಂ.ಎಚ್. ತಹಸೀಲ್ದಾರ್, ಅಯೂಬ್ ಚಿಕ್ಕೋಡಿ, ಬುಡ್ನೇಸಾವ ಸವಟಗಿ, ಜಹೀರ ಖಾಜಿ, ಭಾಷೇಸಾಬ ಅಗಸಿಮನಿ, ಹುಸೇನಸಾಬ ಬೈರಕದಾರ, ಗೌಸುಸಾಬ ಗಸ್ತಿ, ದಸ್ತಗೀರಸಾಬ ನಾಲಬಂದ, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.