

ಬೆಂಗಳೂರು:ರಾಜಧಾನಿಯಲ್ಲಿ ಪ್ರಸಕ್ತ ತಿಂಗಳಲ್ಲಿ ಅಧಿಕ ಮಳೆ ಸುರಿದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಮೇ 1ರಿಂದ 31ರವರೆಗೆ 315 ಮಿ.ಮೀ. ಮಳೆಯಾಗುವ ಮೂಲಕ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ. 2023ರ ಮೇನಲ್ಲಿ 305 ಮಿಮೀ ಮಳೆಯಾಗಿತ್ತು.
ನಗರದಲ್ಲಿ ಪೂರ್ವಮುಂಗಾರು ಅವಧಿಯಲ್ಲಿ ಭರ್ಜರಿ ವರ್ಷಧಾರೆಯಾಗಿದ್ದು, ವಾಡಿಕೆಗಿಂತ ಅಧಿಕವಾಗಿ ಸುರಿದಿದೆ. ಮಾ.1ರಿಂದ ಮೇ 31ರವರೆಗೆ ವಾಡಿಕೆಯಂತೆ 149 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 303 ಮಿ.ಮೀ. ಸುರಿದಿದ್ದು, ವಾಡಿಕೆಗಿಂತ ಶೇ.103 ಅಧಿಕವಾಗಿ ಬಿದ್ದಿದೆ. ಮೇ ತಿಂಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಟ್ರಫ್ (ತೇವಾಂಶ ಮೋಡ) ಇದ್ದ ಕಾರಣ ಜಾಸ್ತಿ ಮಳೆ ಸುರಿಯಲು ಸಾಧ್ಯವಾಗಿತ್ತು.
ರಾಜಧಾನಿಯಲ್ಲಿ ಈ ಬಾರಿ ಮುಂಗಾರು ಅವಧಿ ಅಂದರೆ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಜೂ.1ರಿಂದ ಸೆ.30ರವರೆಗಿನ ಅವಧಿಯನ್ನು ನೈಋತ್ಯ ಮಾನ್ಸೂನ್, ಅ.1ರಿಂದ ಡಿ.31ರವರೆಗಿನ ಅವಧಿಯನ್ನು ಈಶಾನ್ಯ ಮಾನ್ಸೂನ್ ಎಂದು ಕರೆಯಲಾಗುತ್ತದೆ. ಈಶಾನ್ಯ ಮಾರುತ ಅವಧಿಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಪ್ರಧಾನ ಮಳೆಗಾಲವಾಗಿದೆ.
ಕರಾವಳಿ ಆಂಧ್ರಪ್ರದೇಶ, ರಾಯಲಸೀಮೆ, ತಮಿಳುನಾಡು, ಪಾಂಡಿಚೇರಿಗೆ ಉತ್ತಮ ಮಳೆ ತರಲಿದೆ. ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.30 ಈಶಾನ್ಯ ಮಾರುತದಿಂದ ಉಂಟಾಗುತ್ತದೆ. ದಕ್ಷಿಣ ಒಳನಾಡಿನಲ್ಲಿ ವಾರ್ಷಿಕ ಮಳೆ 1,019 ಮಿ.ಮೀ. ಇದ್ದು, ಇದರಲ್ಲಿ 210 ಮಿ.ಮೀ. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ನಲ್ಲಿ ಬೀಳುತ್ತದೆ. ಇದರಲ್ಲಿ ಅಕ್ಟೋಬರ್ನಲ್ಲಿ ಅತಿ ಹೆಚ್ಚು ಅಂದರೆ 171 ಮಿ.ಮೀ. ಮಳೆ ಸುರಿಯಲಿದೆ.
ಮುಂಗಾರು ದುರ್ಬಲ: ನಗರದಲ್ಲಿ ಆರ್ಭಟಿಸುತ್ತಿದ್ದ ಮುಂಗಾರು ಸದ್ಯ ದುರ್ಬಲವಾಗಿದೆ. ಮುಂದಿನ 5 ದಿನ ಮಳೆ ಕ್ಷೀಣವಾಗಲಿದೆ. ಮುಂದಿನ 48 ಗಂಟೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಪ್ರತಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿ.ಸೆ. ಮತ್ತು 21 ಡಿ.ಸೆ. ಇರಲಿದೆ.
ಮೇ ಮಳೆ ವಿವರ
ವರ್ಷ ಮಿ.ಮೀ.ಗಳಲ್ಲಿ
2025 315
2024 181
2023 305
2022 270
2021 130
2020 129
2019 155
2018 239
2017 241
2016 140
2015 178
2014 74