

ದೇವನಹಳ್ಳಿ: ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಸಾಕಷ್ಟು ಗೊಂದಲವನ್ನುಂಟು ಮಾಡಿದ್ದ 10ನೇ ತರಗತಿ ವಾರ್ಷಿಕ ಪರೀಕ್ಷೆ ಜೂ.25ರಂದು ಆರಂಭವಾಗಲಿದ್ದು, ಸುಸೂತ್ರವಾಗಿ ನಡೆಯಲು ತಾಲೂಕು ಶಿಕ್ಷಣ ಇಲಾಖೆ ಪೂರ್ವ ಸಿದ್ಧತೆ ಕೈಗೊಂಡಿದೆ.
ತಾಲೂಕಿನಾದ್ಯಂತ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಬಾರಿ ಹೆಚ್ಚುವರಿಯಾಗಿ ದೇವನಹಳ್ಳಿಯ ಕಾರ್ಮೆಲ್ ಆಂಗ್ಲ ಶಾಲೆ ಹಾಗೂ ಗ್ರಾಮಾಂತರ ಪ್ರೌಢಶಾಲೆಯನ್ನು ತೆಗೆದುಕೊಳ್ಳಲಾಗಿದೆ. ಅನುದಾನಿತ 2, ಅನುದಾನರಹಿತ 3 ಹಾಗೂ ಸರ್ಕಾರಿ 7 ಪ್ರೌಢಶಾಲೆಗಳನ್ನು ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ತಾಲೂಕಿನಲ್ಲಿ 1861 ಬಾಲಕರು ಹಾಗೂ 1519 ಬಾಲಕಿಯರು ಸೇರಿ ಒಟ್ಟು 3380 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ ಎಂದು ಬಿಇಒ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುರಕ್ಷತಾ ಕ್ರಮಗಳು: ಪ್ರತಿ ಕೊಠಡಿಯಲ್ಲಿ 18 ರಿಂದ 20 ವಿದ್ಯಾರ್ಥಿಗಳು ಕೂರುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಡೆಸ್ಕ್‌ಗೆ 2 ವಿದ್ಯಾರ್ಥಿಗಳು, ಡೆಸ್ಕ್‌ನಿಂದ ಹಿಂಬದಿಯ ಡೆಸ್ಕ್‌ಗೆ 1 ಮೀಟರ್ ಅಂತರವಿರುತ್ತದೆ. ಸರ್ಕಾರದಿಂದಲೇ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು, ಪ್ರತಿ ಕೇಂದ್ರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರುತ್ತದೆ. ಯಾರಿಗಾದರೂ ರೋಗ ಲಕ್ಷಣ ಕಂಡುಬಂದರೆ ಅಂತಹವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗುವುದು ಎಂದು ಬಿಇಒ ತಿಳಿಸಿದರು.
ಪ್ರತಿ ಕೇಂದ್ರದಲ್ಲಿ ಇಬ್ಬರು ಆರೋಗ್ಯ ಸಹಾಯಕರು ಮತ್ತು ಇಬ್ಬರು ಸ್ಕೌಟ್ಸ್-ಗೈಡ್ಸ್, ಪೊಲೀಸ್ ಸಿಬ್ಬಂದಿ ಇರುತ್ತಾರೆ. 2 ಹೆಚ್ಚುವರಿ ಕೊಠಡಿ ಕಾಯ್ದಿರಿಸಲಾಗಿದ್ದು, ಪ್ರತಿನಿತ್ಯ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಹಾಲ್ ಟಿಕೆಟ್ ತೋರಿಸಿ ಸಾರಿಗೆ ಬಸ್‌ಗಳ ಮೂಲಕ ವಿದ್ಯಾರ್ಥಿಗಳು ಉಚಿತ ಪ್ರಯಾಣ ಮಾಡಬಹುದು. ಸಾರಿಗೆ ವ್ಯವಸ್ಥೆ ಇಲ್ಲದ ಕಡೆ ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದೆ ತುರ್ತು ಚಿಕಿತ್ಸಾ ವಾಹನ ಇರುತ್ತದೆ ಎಂದರು.
ಪ್ರಥಮ ಸ್ಥಾನ ಕಾಯ್ದುಕೊಳ್ಳಲಾಗುವುದು: ಒಟ್ಟು 60 ಶಾಲೆಗಳ ವಿದ್ಯಾರ್ಥಿಗಳು ಹಾಜರಾಗಲಿದ್ದು, ಕಳೆದ ಸಾಲಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು, ಈ ಬಾರಿ ಪ್ರಥಮ ಸ್ಥಾನವನ್ನು ಕಾಯ್ದುಕೊಳ್ಳಲು ಪೂರಕ ಸಿದ್ಧತೆ ನಡೆಸಲಾಗಿದೆ ಎಂದು ಬಿಇಒ ಆಶ್ವತ್ಥನಾರಾಯಣ ತಿಳಿಸಿದ್ದಾರೆ.
ಕರೊನಾ ನಡುವೆ ಪರೀಕ್ಷೆ ಬರೆಯಲು ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಯಾವುದೇ ಆತಂಕ ಭಯ ಬೇಡ. ಸರ್ಕಾರ ಎಲ್ಲ ರೀತಿಯ ಸುರಕ್ಷಾ ಕ್ರಮ ಕೈಗೊಂಡಿದೆ. ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಶ್ವತ್ಥನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ