

ಮೈಸೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ನಾನು ದುಡ್ಡು ಖರ್ಚು ಮಾಡಲ್ಲ, ಮತದಾರರಿಗೆ ಹಣವನ್ನೂ ಹಂಚುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.
ವಾಟಾಳ್ ನಾಗರಾಜ್ ಅಭಿಮಾನಿಗಳ ಸಂಘದಿಂದ ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ 85ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರನ್ನು ಸನ್ಮಾನಿಸಿದ ಬಳಿಕ ಮಾತನಾಡಿದರು.
ರಾಜಕಾರಣ ಕಲುಷಿತವಾಗಿದೆ, ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಆದಾಗ್ಯೂ, ಕನ್ನಡ, ಕನ್ನಡಿಗರು, ಕರುನಾಡಿನ ಹಿರಿಮೆಯನ್ನು ಸಂಸತ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರಿಸಲು ಸ್ಪರ್ಧಿಸಿದ್ದು, ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಲ್ಲಿ ನಾನೇ ಪ್ರಾಮಾಣಿಕ ಅಭ್ಯರ್ಥಿ ಎಂದು ಹೇಳಿದರು.
ಕಾಯಂ ಆಗಿ ಜೈಲಿನಲ್ಲಿರಬೇಕಾದವರೆಲ್ಲ ಈಗ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂತಹವರೂ ಚುನಾಯಿತರಾಗಲೂಬಹುದು. ಚುನಾವಣೆ ಈಗ ದರೋಡೆಯಾಗಿದೆ. ಹಣವುಳ್ಳವರು ಮಾತ್ರ ನಿಲ್ಲುವಂತಾಗಿದೆ. ಇದರಿಂದ ಪ್ರಾಮಾಣಿಕರಿಗೆ ಹಾಗೂ ನಿಜವಾದ ಜನಸೇವೆ ಮಾಡಬೇಕೆಂಬ ಹಂಬಲ ಹೊಂದಿರುವವರಿಗೆ ಚುನಾವಣೆಗಳು ಮುಂದಿನ ದಿನಗಳಲ್ಲಿ ಕನಸಾಗಲಿದೆ ಎಂದು ಬೇಸರಿಸಿದರು.
ರಾಜ್ಯದಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದ್ದು, ರಾಜ್ಯದ ಎಲ್ಲ ಸ್ಥಾನಗಳನ್ನು ಅವರವರ ಮಕ್ಕಳಿಗೆ, ಸಂಬಂಧಿಕರಿಗೆ ಟಿಕೆಟ್ ಹಂಚಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ರಾಜವಂಶಸ್ಥ ಯದುವೀರ ಸ್ಪರ್ಧಿಸಬಾರದಿತ್ತು. ಬಿಜೆಪಿಗೆ ರಾಜಮನೆತನದ ಮೇಲೆ ಗೌರವವಿದ್ದರೆ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಬೇಕಾಗಿತ್ತು ಎಂದರು.
ನರೇಂದ್ರ ಮೋದಿ ಅವರು ಲಾರಿಗಟ್ಟಲೇ ಹೂಗಳನ್ನು ಮೈಮೇಲೆ ಎರಚಿಸಿಕೊಳ್ಳುವ ಪ್ರವೃತ್ತಿ ಪ್ರಧಾನಿ ಹುದ್ದೆಗೆ ಶೋಭೆ ತರುವುದಿಲ್ಲ. ಆ ಹುದ್ದೆಗೆ ತನ್ನದೇ ಆದ ಘನತೆಯಿದೆ. ಅದನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕನ್ನಡ ಪರ ಹೋರಾಟಗಾರರಾದ ತಾಯೂರು ವಿಠ್ಠಲಮೂರ್ತಿ, ಶಿವಶಂಕರ್, ಪ್ರೊ.ಎಸ್.ಶಿವರಾಜಪ್ಪ, ವೇಣುಗೋಪಾಲ್ ಇದ್ದರು.