ಸಿಎಂ ಉದ್ಘಾಟಿಸುವ ಯೋಜನೆಗಳೆಲ್ಲ ಬಿಜೆಪಿ ಕೊಡುಗೆ

3 HNL 3
Published on

ಹಾನಗಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾನಗಲ್ಲ ತಾಲೂಕಿನಲ್ಲಿ ಬಿಜೆಪಿ ಅವಧಿಯಲ್ಲಿ ದಿ. ಸಿ.ಎಂ. ಉದಾಸಿ ಅವರು ಮಂಜೂರಾಗಿ, ಕಾಮಗಾರಿ ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟಿಸಲು ಮೇ 4ರಂದು ಆಗಮಿಸುತ್ತಿದ್ದಾರೆ. ಈ ಎಲ್ಲ ಯೋಜನೆ ಬಿಜೆಪಿ ಸರ್ಕಾರದ ಕೊಡುಗೆಗಳು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಸವರಾಜ ಹಾದಿಮನಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 500 ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನದಲ್ಲಿ ಬಾಳಂಬೀಡ ಏತ ನೀರಾವರಿ ಯೋಜನೆ, ಹಿರೇಕಾಂಶಿ ಏತ ನೀರಾವರಿ ಯೋಜನೆ, ಸಮ್ಮಸಗಿ ನೀರಾವರಿ ಯೋಜನೆ, ಪಟ್ಟಣದ ಸರ್ಕಾರಿ ಕಚೇರಿಗಳ ಸಂಕೀರ್ಣ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿವೆ. ಇವು ಕಾಂಗ್ರೆಸ್ ಅವಧಿಯ ಕಾಮಗಾರಿಗಳಲ್ಲ. ಬಿಜೆಪಿ ಸರ್ಕಾರ ನೀಡಿದ ಅನುದಾನದಿಂದಾಗಿ ನಿರ್ಮಾಣಗೊಂಡಿವೆ ಎಂದರು.

ತಾಲೂಕಿನಲ್ಲಿ ತೀರ ಅಗತ್ಯವಾದ ಕೂಸನೂರು ಏತ ನೀರಾವರಿ, ನರೇಗಲ್ಲ ಏತ ನೀರಾವರಿ, ಮೂಡಿ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಬೇಕಿದೆ. ದೊಡ್ಡ ತಾಲೂಕು ಆಗಿರುವುದರಿಂದ ಬೆಳಗಾಲಪೇಟೆ, ತಿಳವಳ್ಳಿ, ಚಿಕ್ಕಾಂಶಿಹೊಸೂರುಗಳನ್ನು ಸರ್ಕಾರ ನೂತನ ಹೋಬಳಿ ಕೇಂದ್ರಗಳನ್ನಾಗಿ ಘೋಷಿಸಬೇಕಿದೆ. ತಿಳವಳ್ಳಿಗೆ ಪೊಲೀಸ್ ಸ್ಟೇಷನ್ ಮಂಜೂರಾಗಬೇಕು. ಹಾನಗಲ್ಲ ತಾಲೂಕಿನಲ್ಲಿನ ಎಲ್ಲ ರಸ್ತೆಗಳ ಮರು ಡಾಂಬರೀಕರಣ, ನನೆಗುದಿಗೆ ಬಿದ್ದ ಮಾವು ಸಂಸ್ಕರಣ ಘಟಕ ಕಾಮಗಾರಿ ಆರಂಭವಾಗಬೇಕು. ರೈತರ ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣ ಅವಶ್ಯವಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೀಘ್ರ ಈ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ತಾಲೂಕಿನಲ್ಲಿ ಸಾರಿಗೆ, ಕಾನೂನು-ಸುವ್ಯವಸ್ಥೆ ದಾರಿ ತಪ್ಪಿವೆ. ವಿದ್ಯುತ್ ಅವಾಂತರಕ್ಕೆ ರೈತರೂ ಸೇರಿದಂತೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದರು.

ತಾಲೂಕಿನಲ್ಲಿ ಕೃಷಿ ಅಭಿವೃದ್ಧಿಗಾಗಿ ನೀರಾವರಿಗೆ ಬಹುಮುಖ್ಯ ಪ್ರಾಮುಖ್ಯತೆ ನೀಡಿದ್ದರಿಂದ ಬಾಳಂಬೀಡ ಏತ ನೀರಾವರಿ ಯೋಜನೆಗೆ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಹೆಸರು ನಾಮಕರಣ ಮಾಡಬೇಕು. ಬಸಾಪುರ ಏತ ನೀರಾವರಿ ಯೋಜನೆಗೆ ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರ ಹೆಸರು ಇಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಭೋಜರಾಜ ಕರೂದಿ, ಗ್ರಾಪಂ ಒಕ್ಕೂಟಗಳ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ, ಜಿಲ್ಲಾ ಕಾನೂನು ಪ್ರಕೋಷ್ಠ ಸಂಚಾಲಕ ಎಸ್.ಎಂ. ಕೋತಂಬರಿ, ಮುಖಂಡ ಬಸಣ್ಣ ಹಾದಿಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net