ಅಂಗನವಾಡಿ ಹುದ್ದೆಗಳೆಲ್ಲ ಖಾಲಿ... ಆಟ-ಪಾಠ ಇನ್ನೆಲ್ಲಿ?

anganwadi story
ನರೇಗಲ್ಲನ ಬಸ್ ನಿಲ್ದಾಣದ ಹತ್ತಿರದ ಅಂಗನವಾಡಿ ಕೇಂದ್ರ.
Published on

ನರೇಗಲ್ಲ: ಅಂಗನವಾಡಿಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಸಿಬ್ಬಂದಿ ನೇಮಕ, ಮೂಲಸೌಕರ್ಯ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ. ಜೂ. 1ರಿಂದಲೇ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿವೆ. ಆದರೆ, ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರ ಸೇವೆಯೇ ಲಭ್ಯವಿಲ್ಲ. ಇವರ ನೇಮಕಾತಿ ಪ್ರಕ್ರಿಯೆಗೆ ಗ್ರಹಣ ಹಿಡಿದಿದೆ.

ರೋಣ- ಗಜೇಂದ್ರಗಡ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿ ನನೆಗುದಿಗೆ ಬಿದ್ದಿದೆ. ಕಾರ್ಯಕರ್ತರು, ಸಹಾಯಕಿಯರು ಇಲ್ಲದಿರುವುದರಿಂದ ಅಂಗನವಾಡಿಗಳಿಗೆ ಮಕ್ಕಳು ಬಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಅವಳಿ ತಾಲೂಕಿನಲ್ಲಿ ಖಾಲಿ ಇದ್ದ ಒಟ್ಟು 25 ಕಾರ್ಯಕರ್ತೆಯರು, 45 ಸಹಾಯಕಿಯರ ಹುದ್ದೆಗೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ರೋಣ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಆಸಕ್ತರಿಗೆ ಒಂದು ತಿಂಗಳ ಕಾಲಾವಧಿ ನೀಡಲಾಗಿತ್ತು. ಅರ್ಜಿ ಸಲ್ಲಿಸಿ ಮೂರು ತಿಂಗಳಾದರೂ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ.

ಸ್ವಂತ ಕಟ್ಟಡಗಳಿಲ್ಲ: ಅವಳಿ ತಾಲೂಕಿನಲ್ಲಿ ಒಟ್ಟು 316 ಅಂಗನವಾಡಿ ಕೇಂದ್ರಗಳಿದ್ದು, 240 ಕೇಂದ್ರಗಳು ಸ್ವಂತ ಕಟ್ಟಡವನ್ನು ಹೊಂದಿವೆ. 54 ಕೇಂದ್ರಗಳು ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. 22 ಕೇಂದ್ರಗಳು ಸರ್ಕಾರದ ಇತರೆ ಕಟ್ಟಡಗಳಲ್ಲಿ (ಸಮುದಾಯ ಭವನ, ಶಾಲೆ) ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಸಂಸ್ಥೆಗಳಿಂದ ಭೂಮಿ ವಿತರಣೆಯಾಗಿಲ್ಲ. ಭೂಮಿ ಮಂಜೂರಾದರೂ ಕಟ್ಟಡ ಕಾಮಗಾರಿ ಪ್ರಾರಂಭವಾಗಿಲ್ಲ. ಅನಿವಾರ್ಯವಾಗಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ.

ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದರೂ ನೇಮಕಾತಿ ವಿಳಂಬ ಮಾಡಲಾಗುತ್ತಿದೆ. ತಕ್ಷಣವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾಡಳಿತ ಮುಂದಾಗಬೇಕು. ಇಲ್ಲದಿದ್ದರೆ ಮಕ್ಕಳ ಆಟ-ಪಾಠಕ್ಕೆ ತೊಂದರೆಯಾಗಲಿದೆ.-ಹುಲಗಪ್ಪ ಬಂಡಿವಡ್ಡರ ನರೇಗಲ್ಲ ನಿವಾಸಿ ವಿಧಾಸಭಾ ಚುಣಾವಣೆ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿ ವಿಳಂಬವಾಗಿದೆ. ಈಗಾಗಲೇ ಅರ್ಜಿ ಪಡೆದುಕೊಂಡಿದ್ದು, ಜಿಲ್ಲಾಧಿಕಾರಿಯಿಂದ ಸೂಚನೆ ಬಂದ ತಕ್ಷಣ ಅರ್ಜಿಗಳು ವಿಲೇವಾರಿ ಮಾಡಿ, ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳಿಂದ ಭೂಮಿ ಮಂಜೂರಾತಿ ಪಡೆದ ತಕ್ಷಣ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ.-ಬೆಟದೇಶ ಮಾಳೆಕೊಪ್ಪ ರೋಣ ಸಿಡಿಪಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net