

ನರಗುಂದ: ಜ್ಞಾನ ಪಡೆಯದಿದ್ದರೆ ಜೀವನದಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಪುಣ್ಯ ಕಾರ್ಯಗಳಿಂದ ಮಹಾನ್ ಸತ್ಪುರುಷರು ಇಡೀ ಲೋಕಕ್ಕೆ ಬೆಳಕು ನೀಡುವಂತಹ ಕೆಲಸ ಮಾಡಿದ್ದಾರೆ. ನರಗುಂದ ವಿರಕ್ತಮಠದ ಲಿಂ. ಶ್ರೀ ಚನ್ನಬಸವ ಮಹಾ ಸ್ವಾಮೀಜಿಯವರು ಭಕ್ತರ ಬಾಳಿಗೆ ಬೆಳಕು ತೋರಿದ್ದಾರೆ ಎಂದು ಮುಂಡರಗಿಯ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ವ ಧರ್ಮಗಳ ಶ್ರದ್ಧಾಕೇಂದ್ರ ವಿರಕ್ತ ಮಠದ ಲಿಂ. ಶ್ರೀ ಚನ್ನಬಸವ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಜೀವನ ದರ್ಶನ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ತ್ಯಾಗ ಮನೋಭಾವನೆ ಅಳವಡಿಕೊಳ್ಳಬೇಕು. ಭಕ್ತರು ನಾನು ಎನ್ನುವ ಅಹಂಭಾವ ತೊರೆಯಬೇಕು. ಜೀವನ ಸಫಲತೆಗೊಳ್ಳಬೇಕಾದರೆ ಪ್ರತಿಯೊಬ್ಬರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರಬೇಕು. ಗುರುವಿನ ಕೃಪೆಗೆ ಪಾತ್ರರಾಗುವಂತೆ ಜೀವಿಸಬೇಕು ಎಂದರು.
ಅಂತೂರ ಬೆಂತೂರಿನ ಕುಮಾರ ದೇವರು ಮಾತನಾಡಿ, ಭಕ್ತರು ಜೀವನದಲ್ಲಿ ವಿಶೇಷ ಸಾಧನೆ ಮಾಡುವ ಗುರಿ ಹೊಂದಿದಾಗ ಅದಕ್ಕೊಂದು ಬೆಲೆ ಬರುತ್ತದೆ. ಕಾಯಾ, ವಾಚಾ, ಮನಸಾ ಪೂರ್ವಕ ದೇವರ ಸ್ಮರಣೆಯಲ್ಲಿ ತೊಡಗಿಕೊಂಡು ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಸದಾನಂದ ಶಾಸ್ತ್ರೀಜಿ ಪ್ರವಚನ ನೀಡಿದರು. ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿದರು.