ಶಿಕ್ಷಣದಿಂದ ಮಾತ್ರ ಸರ್ವ ಸಾಧನೆ

29 KRN-1
ಕೆ.ಆರ್.ನಗರದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ತಮ್ಮ ನಿವಾಸದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 263ನೇ ರ‌್ಯಾಂಕ್ ಪಡೆದ ಎ.ಸಿ.ಪ್ರೀತಿ ಮತ್ತು ಅವರು ಪಾಲಕರನ್ನು ಅಭಿನಂದಿಸಿದರು. ಶಾಂತಮ್ಮ ವಿಶ್ವನಾಥ್, ಸಂತೋಷ್, ಎ.ಎಸ್.ಚನ್ನಬಸಪ್ಪ, ಡಾ.ಮೆಹಬೂಬ್‌ಖಾನ್, ಕೆ.ಎಲ್.ರಮೇಶ್, ಡಿಂಡಿಮ ಶಂಕರ್, ಡಾ.ಡಿ.ನಟರಾಜು ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ಶಿಕ್ಷಣದಿಂದ ಮಾತ್ರ ಸರ್ವವನ್ನು ಸಾಧಿಸಬಹುದು ಎಂದು ಎ.ಸಿ.ಪ್ರೀತಿ ತೋರಿಸಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 263ನೇ ರ‌್ಯಾಂಕ್ ಪಡೆದ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದ ಚನ್ನಬಸಪ್ಪ-ನೇತ್ರಾವತಿ ದಂಪತಿ ಪುತ್ರಿ ಎ.ಸಿ.ಪ್ರೀತಿ ಅವರಿಗೆ ಕೆ.ಆರ್.ನಗರ ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಕುಟುಂಬದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸಾಧನೆಗೆ ಬಡತನ ಮತ್ತು ಹಳ್ಳಿಗಾಡಿನ ವಾತಾವರಣ ಅಡ್ಡಿಯಾಗುವುದಿಲ್ಲ ಎಂದು ತೋರಿಸುವ ಮೂಲಕ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಪೂರೈಸಿ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿ ಹುಟ್ಟೂರು, ಪಾಲಕರು ಹಾಗೂ ಕಲಿಸಿದ ಶಿಕ್ಷಕರು ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಶಂಸಿಸಿದರು.

ದೇಶದ ಬೆಳವಣಿಗೆಯಲ್ಲಿ ಅಕ್ಷರ ಮತ್ತು ಆರೋಗ್ಯ ಪ್ರಮುಖವಾಗಿದ್ದು ಅವೆರಡು ದೊರೆತರೆ ಸಾಮಾನ್ಯ ವಿದ್ಯಾರ್ಥಿಗಳು ಮುಗಿಲೆತ್ತರದ ಸಾಧನೆ ಮಾಡಬಹುದು. ಆಳುವ ಸರ್ಕಾರಗಳು ಈ ವಿಚಾರದ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಸಾಧಕ ವಿದ್ಯಾರ್ಥಿಗಳಿಗೆ ಪಾಲಕರ ಜತೆಗೆ ಸಾರ್ವಜನಿಕರು ಪ್ರೋತ್ಸಾಹ ನೀಡಿದರೆ ಅವರು ಸಮಾಜಕ್ಕೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಲಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಅವರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಶಾಂತಮ್ಮ ವಿಶ್ವನಾಥ್, ಪುತ್ರ ಸಂತೋಷ್ ಮತ್ತು ಕುಟುಂಬಸ್ಥರು, ಎ.ಸಿ.ಪ್ರೀತಿ ಹಾಗೂ ಅವರ ಪಾಲಕರನ್ನು ಆತ್ಮೀಯವಾಗಿ ಅಭಿನಂದಿಸಿ, ನೆನಪಿ ಕಾಣಿಕೆ ನೀಡಿದರು.

ಎ.ಸಿ.ಪ್ರೀತಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಧೈರ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಾಗಿ ಮೈಗೂಡುತ್ತದೆ. ಓದುವ ಛಲ ಮತ್ತು ಹಂಬಲವಿದ್ದರೆ ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂದು ತಿಳಿಸಿದರು.

ನನ್ನ ಈ ಸಾಧನೆಗೆ ತಂದೆ ಮತ್ತು ತಾಯಿಯ ಪ್ರೋತ್ಸಾಹ ಹಾಗೂ ಕಲಿಸಿದ ಶಿಕ್ಷಕರ ಪ್ರೇರಣೆ ಕಾರಣ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಮನದಿಂಗಿತವನ್ನು ಪಾಲಕರ ಬಳಿ ಹೇಳಿಕೊಂಡು ಅವರ ಮನವೊಲಿಸಿ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ನಮ್ಮ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದರು.

ದೇಶದ ಯಾವುದೇ ರಾಜ್ಯದಲ್ಲಿ ನನಗೆ ಸೇವೆ ಸಲ್ಲಿಸಲು ಅವಕಾಶ ದೊರೆತರೂ ಮುಕ್ತ ಮನಸ್ಸಿನಿಂದ ಅಲ್ಲಿಗೆ ಹೋಗಿ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದ ಅವರು ಕರ್ನಾಟಕದಲ್ಲಿ ವೃತ್ತಿ ಆರಂಭಿಸಲು ಉತ್ಸುಕಳಾಗಿದ್ದೇನೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮಶಂಕರ್, ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಗರುಡಗಂಭಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ಪದಾಧಿಕಾರಿಗಳಾದ ಜಿ.ಜೆ.ಮಹೇಶ್, ಮಹದೇವ್, ಮಧುಕುಮಾರ್, ನಂಜನಗೂಡು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ದೀಪು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net