5,8,9ನೇ ತರಗತಿ ಎಲ್ಲ ವಿದ್ಯಾರ್ಥಿಗಳು ಪಾಸ್

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ತಳಮಳಕ್ಕೆ ಸಿಲುಕಿಕೊಂಡಿದ್ದ 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ತೇರ್ಗಡೆ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯ 1.32 ಲಕ್ಷ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ರಮದಿಂದ ಸಂತಸಗೊಂಡಿರುವ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಪ್ರವೇಶ ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ. ಇಷ್ಟು ದಿನ ತಲೆದೋರಿದ್ದ ಗೊಂದಲವೂ ಇದೀಗ ತಿಳಿಯಾಗಿದೆ.


ರಾಜ್ಯದ 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿತ್ತು. ಇದನ್ನು ವಿರೋಧಿಸಿದ ಖಾಸಗಿ ಶಾಲೆಗಳ ಸಂಘವು ಕಾನೂನು ಹೋರಾಟ ಕೈಗೊಂಡಿತು. ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲೂ ವಿಚಾರಣೆ ನಡೆಯಿತು.


ಈ ನಡುವೆಯೇ, 5ನೇ ತರಗತಿಯ 4 ವಿಷಯಗಳ ಪರೀಕ್ಷೆ ಮುಗಿದು ಹೋಯಿತು. 8 ಹಾಗೂ 9ನೇ ತರಗತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆಯಿತು. ಆದಾಗ್ಯೂ ಪರೀಕ್ಷೆಗೆ ತಡೆಯಾಜ್ಞೆ, ತೆರವು ಕ್ರಮದ ನಡುವೆಯೂ ಅಂತಿಮವಾಗಿ ಮೌಲ್ಯಮಾಪನ ಕಾರ್ಯವೂ ಪೂರ್ಣಗೊಂಡಿತ್ತು. ಏಪ್ರಿಲ್ 8ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿತ್ತು. ಬಳಿಕ ಫಲಿತಾಂಶವನ್ನು ಪ್ರಕಟಿಸಲು ಸುಪ್ರೀಂಕೋರ್ಟ್ ತಡೆಯಾಜ್ಞೆಯನ್ನು ನೀಡಿತ್ತು. ಅಂತಿಮ ತೀರ್ಪು ಬಾಕಿ ಉಳಿದಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲದೊಂದಿಗೆ ಬೇಸರವನ್ನೂ ಸೃಷ್ಟಿಸಿತ್ತು.


2024-25ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29ರಿಂದ ಶುರುವಾಗಲಿದೆ. ಆದರೆ, ಈ ವಿದ್ಯಾರ್ಥಿಗಳ ಫಲಿತಾಂಶ ಹೊರಬಿದ್ದಿರಲಿಲ್ಲ. ಇದು ಅವರನ್ನು ಅಡಕತ್ತರಿಗೆ ಸಿಲುಕಿಸುವಂತೆ ಮಾಡಿತ್ತು. ಉಳಿದ ತರಗತಿಯ ಮಕ್ಕಳು ಏಪ್ರಿಲ್ ಮೊದಲ ವಾರದಲ್ಲಿ ಫಲಿತಾಂಶವನ್ನು ಪಡೆದುಕೊಂಡು ಮುಂದಿನ ತರಗತಿಗೆ ತೇರ್ಗಡೆಯಾಗಿದ್ದರು. ಜತೆಗೆ, ಮುಂದಿನ ಶೈಕ್ಷಣಿಕ ಸಾಲಿಗೆ ಸಮವಸ್ತ್ರ, ಪುಸ್ತಕ, ನೋಟ್‌ಬುಕ್, ಶೂ ಸೇರಿದಂತೆ ಇನ್ನಿತರ ಅಗತ್ಯ ಕಲಿಕಾ ವಸ್ತುಗಳ ಖರೀದಿ ಮಾಡಿ ಶಾಲೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಆದರೆ, 5, 8, 9ನೇ ತರಗತಿ ಮಕ್ಕಳಲ್ಲಿ ಈ ಸಂಭ್ರಮ ಇರಲಿಲ್ಲ. ಮಂಕು ಕವಿದಂತಾಗಿತ್ತು. ಆರ್‌ಟಿಇ ಕಾಯ್ದೆಯಡಿ ಎಲ್ಲ ಮಕ್ಕಳನ್ನು ತೇರ್ಗಡೆ ಮಾಡಬೇಕೆಂಬ ನಿಯಮವಿದ್ದರೂ ಈ ವಿದ್ಯಾರ್ಥಿಗಳು, ಅವರ ಪಾಲಕರಲ್ಲಿ ಆತಂಕವಂತೂ ಇದ್ದೇ ಇತ್ತು. ಇದೀಗ ಅದು ನಿವಾರಣೆಯಾಗಿದೆ.


ಏನು ಸಮಸ್ಯೆ ಆಗಿತ್ತು?


ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಂಡಿದೆ. ಮುಂದಿನ ಶೈಕ್ಷಣಿಕ ಸಾಲು ಶುರುವಾಗಬೇಕಿದೆ. ಆದರೆ, 5, 8, 9ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದೆ ಇರುವುದು ವಿವಿಧ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿತ್ತು. ಮುಂದಿನ ಶೈಕ್ಷಣಿಕ ವರ್ಷಕ್ಕೆ, ತರಗತಿಗೆ ಶಾಲಾ ಪ್ರವೇಶಾತಿ, ದಾಖಲಾತಿ ಮಾಡಲು, ಪ್ರವೇಶ ಶುಲ್ಕ ಪಾವತಿಸಲು, ಬೇರೆ ಸ್ಥಳಗಳಿಗೆ ಪ್ರಮಾಣಪತ್ರವನ್ನು ವಿತರಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅಗತ್ಯ ಕ್ರಮ ವಹಿಸಬೇಕಿತ್ತು. ಮಕ್ಕಳ ಶೈಕ್ಷಣಿಕ ಭವಿಷ್ಯ ಸುಗಮಗೊಳಿಸಲು ಶಿಕ್ಷಣ ಇಲಾಖೆ ಈ ತೀರ್ಮಾನವನ್ನು ತೆಗೆದುಕೊಂಡಿದೆ.


ಈಗಾಗಲೇ ಶಾಲೆಗಳಲ್ಲಿ ನಡೆದಿರುವ ಮೌಲ್ಯಾಂಕನದ ಆಧಾರದ ಮೇಲೆ ಮಕ್ಕಳನ್ನು ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಇದು ವಿದ್ಯಾರ್ಥಿಗಳ ಸಂಭ್ರಮಕ್ಕೆ ಕಾರಣವಾಗಿದ್ದರೆ, ಅವರ ಪಾಲಕರು ಸಂತಸಗೊಂಡಿದ್ದಾರೆ. ಮುಂದಿನ ತರಗತಿಗೆ ಬಡ್ತಿ ಪಡೆದುಕೊಂಡಿರುವ ಈ ಮಕ್ಕಳು ಮುಂದಿನ ತರಗತಿಯ ದಾಖಲಾತಿ ಪ್ರಕ್ರಿಯೆಗೆ ಮುಂದಾಗುತ್ತಿದ್ದಾರೆ. ಬೇರೆ ಕಡೆಗೆ ವರ್ಗಾವಣೆಗೊಂಡಿರುವ ಪಾಲಕರ ಮಕ್ಕಳು, ತಮ್ಮ ವರ್ಗಾವಣೆ ಪತ್ರ ಪಡೆದುಕೊಳ್ಳಲು ಶಾಲೆ ಕಡೆಗೆ ಮುಖ ಮಾಡಿದ್ದಾರೆ. ಇಷ್ಟು ಕಾಯ್ದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಸಂತಸದ ಸಿಹಿ ದೊರಕಿದೆ.


ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಉತ್ಸಾಹ ಹಿಮ್ಮಡಿ:


9ನೇ ತರಗತಿಯಿಂದ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ಖಾಸಗಿ ಶಾಲೆಗಳಲ್ಲಿ 10ನೇ ತರಗತಿ ಮಕ್ಕಳಿಗೆ ಪಾಠವನ್ನು ಮೇ ತಿಂಗಳ ಮೊದಲ ವಾರದಿಂದಲೇ ಶುರು ಮಾಡಲಾಗಿದೆ. ಇದೀಗ ಇವರ ಉತ್ಸಾಹ ಇನ್ನಷ್ಟು ಹಿಮ್ಮಡಿಯಾಗಿದೆ.

ಸರ್ಕಾರಿ, ಖಾಸಗಿ ಶಾಲೆಗಳ ನಡುವೆ ಕಂದಕ ಸೃಷ್ಟಿ:


ಆರ್‌ಟಿಇ ಕಾಯ್ದೆಯಡಿ ಎಲ್ಲ ಶಾಲಾ ಮಕ್ಕಳನ್ನು ಉತ್ತೀರ್ಣ ಮಾಡಲೇಬೇಕು. ಇದು ಪಾಲನೆ ಸಹ ಆಗುತ್ತಿತ್ತು. ಈ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಮೂಲಕ ಯಾವ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ, ಯಾವ ವಿಷಯ ಅವರಿಗೆ ಅರ್ಥವಾಗಿಲ್ಲ. ಬೋಧನೆಯಲ್ಲಿ ಎಲ್ಲಿ ಲೋಪವಾಗುತ್ತಿದೆ, ಯಾವ ರೀತಿ ತಿದ್ದುಪಡಿ ಮಾಡಿಕೊಳ್ಳಬೇಕು ಎಂಬುದು ಪರೀಕ್ಷಾ ಫಲಿತಾಂಶದಿಂದ ತಿಳಿದು ಬರುತ್ತಿತ್ತು. ಇದರಿಂದ ಗುಣಮಟ್ಟದ ಶಿಕ್ಷಣ ಕಲ್ಪಿಸಿಕೊಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ನೆರವಾಗುತ್ತಿತ್ತು. ಆದರೆ, ಇದಕ್ಕೆ ಅವಕಾಶ ದೊರೆಯಲಿಲ್ಲ ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಚ್.ಕೆ.ಪಾಂಡು ಹೇಳಿದರು.


ಈ ತರಗತಿಗಳ ಪರೀಕ್ಷೆ ಕೇವಲ ಒಂದು ಟೂಲ್ ಆಗಿತ್ತು. ಕಲಿಕಾ ಪ್ರಕ್ರಿಯೆ ಅವಲೋಕನಕ್ಕೆ ದಾರಿ ಮಾಡಿಕೊಡುತ್ತಿತ್ತು. ಚರ್ಚೆ, ಸಂವಾದ, ವಿಮರ್ಶೆಗೂ ಅವಕಾಶಗಳು ತೆರೆದುಕೊಳ್ಳುತ್ತಿದ್ದವು. ಆದರೆ, ಇದು ಸಾಧ್ಯವಾಗಲಿಲ್ಲ. ಹೀಗಾದರೆ, ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಲಿದೆ. ಇದರಿಂದ ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮಾಂತರ, ಬಡವರ ಮಕ್ಕಳಿಗೆ ಅನ್ಯಾಯವಾಗಲಿದೆ ಎಂದೂ ಕಳವಳ ವ್ಯಕ್ತಪಡಿಸಿದರು.

ಪ್ರಾಥಮಿಕ ಹಂತದಿಂದಲೇ ಮಾಡಿ:

‘ಶಿಕ್ಷಣ ಇಲಾಖೆಯ ಉದ್ದೇಶ ಸರಿ ಇದೆ. ಪ್ರಾಥಮಿಕ ಹಂತವಾದ 1ನೇ ತರಗತಿಯಿಂದ ಬುನಾದಿ ಶಿಕ್ಷಣವನ್ನು ಸಮರ್ಪಕವಾಗಿ ನೀಡಬೇಕು. ಅದು ಆಗುತ್ತಿಲ್ಲ. ಸರ್ಕಾರಿ ಶಾಲಾ ಮಕ್ಕಳು ಕಲಿಕೆಯಲ್ಲಿ ಬಹಳಷ್ಟು ದುರ್ಬಲರಾಗಿರುತ್ತಾರೆ. ಅವರ ಮನಸ್ಥಿತಿ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಬೇರೆಯೇ ಇರುತ್ತದೆ. ಅಂತಹ ಮಕ್ಕಳಿಗೆ ಏಕಾಏಕಿ ಮೌಲ್ಯಾಂಕ ಪರೀಕ್ಷೆ ನಡೆಸುವುದು ಸಮಂಜಸ ಎನಿಸುವುದಿಲ್ಲ. ಇದು ಪ್ರಾಥಮಿಕ ಹಂತದಿಂದಲೇ ಬರಬೇಕು ಎಂದು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ಹೇಳಿದರು.

ಮಕ್ಕಳ ಸಂಖ್ಯೆ ಎಷ್ಟು?

2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 3,446 ಶಾಲೆಗಳಲ್ಲಿ 4.21 ಲಕ್ಷ ಮಕ್ಕಳು ಓದುತ್ತಿದ್ದರು. ಈ ಪೈಕಿ 5ನೇ ತರಗತಿಯಲ್ಲಿ 41,519, 8ನೇ ತರಗತಿಯಲ್ಲಿ 45,171 ಮತ್ತು 9ನೇ ತರಗತಿಯಲ್ಲಿ 46,243 ಸೇರಿದಂತೆ 1,32,933 ಮಕ್ಕಳ ಪರೀಕ್ಷಾ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಇದೀಗ ಈ ಎಲ್ಲ ಮಕ್ಕಳು ಪಾಸ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net