ಎಲ್ಲ ಸಿಬ್ಬಂದಿಗೂ ಕನಿಷ್ಠ ವೇತನ ಜಾರಿಗೊಳಿಸುವಂತೆ ಗ್ರಾಪಂ ನೌಕರರ ಒತ್ತಾಯ

Kushtagi Taluk Gramapanchayat Workers Appeal
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕುಷ್ಟಗಿ ತಾಲೂಕು ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದ ತಾಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿ ಸಿಬ್ಬಂದಿ ವೀರಸಂಗಯ್ಯಗೆ ಮನವಿ ಸಲ್ಲಿಸಿದರು.
Published on

ಕುಷ್ಟಗಿ: ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಗ್ರಾಪಂನ ಎಲ್ಲ ಸಿಬ್ಬಂದಿಗೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದ ತಾಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಕಚೇರಿ ಸಿಬ್ಬಂದಿ ವೀರಸಂಗಯ್ಯಗೆ ಮನವಿ ಸಲ್ಲಿಸಿದರು.

ಗ್ರಾಪಂ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿಸಬೇಕು. 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಗ್ರಾಪಂ ಸಿಬ್ಬಂದಿ ವೇತನಕ್ಕೆ ಪ್ರತ್ಯೇಕ ಹಣ ಮೀಸಲಿಡಬೇಕು. ಬಾಕಿ ಇರುವ 12-16ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು. ಕರ್ತವ್ಯ ನಿರತ ಸಿಬ್ಬಂದಿ ಮೃತರಾದರೆ ಅನುಕಂಪದ ಆಧಾರದ ಮೇಲೆ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬೇರೆ ಇಲಾಖೆಗಳ ಕೆಲಸದ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಗ್ರಾಪಂ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವ ಸಿಬ್ಬಂದಿಗೆ ಮಾಸಿಕ ಗೌರವ ಧನ ಪಾವತಿಸಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಚಂದನಗೌಡ ಗೌಡರ್, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಕೊಂಡಗುರಿ, ಪದಾಧಿಕಾರಿಗಳಾದ ಛತ್ರಪ್ಪ ಕಾಟೇಗಲ್, ಷಣ್ಮುಖಪ್ಪ ತೆವರನ್ನವರ್, ಮಹಾಂತೇಶ ಮುದೇನೂರು, ಹನುಮಂತಪ್ಪ ಬಿಜಕಲ್, ವಿಠೋಬ ಸಂಗನಾಳ, ವಿರೂಪಾಕ್ಷಪ್ಪ ಜರಗಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net