

ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಗೌರಿ-ಗಣೇಶ ಹಬ್ಬಕ್ಕೆ ನಗರ ಸೇರಿದಂತೆ ಜಿಲ್ಲಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿವರ್ಷ ತಾಯಿ ಸ್ವರ್ಣಗೌರಿಯ ಹಬ್ಬ, ಮಾರನೇ ದಿನ ಗಣೇಶನ ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಸಲ ಗೌರಿ-ಗಣೇಶ ಹಬ್ಬವನ್ನು ಒಂದೇ ದಿನ ಅಂದರೆ, ಸೆ. 18ರಂದು ಆಚರಿಸಲಾಗುತ್ತಿದೆ. ಆದ್ದರಿಂದ ಗೌರಿ-ಗಣೇಶನನ್ನು ಕರೆತರಲು ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೂರ್ವತಯಾರಿ ಭರದಿಂದ ಸಾಗಿದೆ.
ಪ್ರತಿವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ಪೂಜಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.
ಹಬ್ಬದ ಮುನ್ನಾ ದಿನವಾದ ಭಾನುವಾರ ಬೆಲೆ ಏರಿಕೆಯ ನಡುವೆಯೂ ಜನರು ಮಾರುಕಟ್ಟೆಯಲ್ಲಿ ಮುಗಿಬಿದ್ದು ಪೂಜಾ ಸಾಮಗ್ರಿ ಖರೀದಿಸಿದರು. ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ಶಿವರಾಂಪೇಟೆ, ಚಿಕ್ಕಗಡಿಯಾರ, ದಿವಾನ್ಸ್ ರಸ್ತೆ, ಸಯ್ಯಜಿರಾವ್ ರಸ್ತೆ, ಧನ್ವಂತ್ರಿ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು. ರಸ್ತೆ ಬದಿಗಳಲ್ಲೂ ವ್ಯಾಪಾರ ವಹಿವಾಟು ಜೋರಾಗಿತ್ತು. ವರ್ತಕರು ತಳ್ಳುವಗಾಡಿಯಲ್ಲಿ ಹೂ, ಹಣ್ಣು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಹೂ, ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದಾಗ್ಯೂ ಜನರು ಖರೀದಿಯಲ್ಲಿ ಹಿಂದೆ ಬೀಳಲಿಲ್ಲ. ಒಂದು ಮೊಳ ಸೇವಂತಿಗೆ ಹೂವು 100 ರೂ., ಬಣ್ಣದ ಸೇವಂತಿಗೆ 85 ರೂ., ಗುಲಾಬಿ ಕೆ.ಜಿ.ಗೆ 300 ರೂ., ಮಲ್ಲಿಗೆ ಮೀಟರ್‌ಗೆ 45 ರೂ., ಕನಕಾಂಬರ ಮೀಟರ್‌ಗೆ 250ರಿಂದ 280 ರೂ., ತಾವರೆ ಹೂ ಒಂದಕ್ಕೆ 25 ರೂ., ದಾಳಿಂಬೆ ಕೆ.ಜಿ. 125 ರೂ., ಸೇಬು 150 ರೂ., ಮೂಸಂಬಿ 55 ರೂ., ದ್ರಾಕ್ಷಿ 100 ರಿಂದ 150 ರೂ., ಸೀತಾಫಲ 80 ರೂ., ಬಾಳೆಹಣ್ಣು 40 ರಿಂದ 90 ರೂ., ಜೋಡಿ ಬಾಳೆಕಂದು 20 ರೂ.ಗೆ ಮಾರಾಟ ಮಾಡಲಾಯಿತು.
ಗೌರಿ ಮತ್ತು ಗಣೇಶನ ವಿಗ್ರಹ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಬಿರುಸಿನಿಂದ ನಡೆಯಿತು. ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ಖರೀದಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಒಲವು ತೋರಿಸಿದ್ದು, ಕೆಲವೆಡೆ ಪಿಒಪಿ ಮೂರ್ತಿ ಖರೀದಿಯೂ ಕಂಡುಬಂತು.
ನಗರದ ಪ್ರಮುಖ ಗಣೇಶ ದೇವಸ್ಥಾನಗಳಲ್ಲೂ ವಿಶೇಷ ತಯಾರಿ ಮಾಡಿಕೊಂಡು, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮುಜರಾಯಿ ಇಲಾಖೆಯ ಅರಮನೆ ಉತ್ತರ, ಪಶ್ಚಿಮ ಬಾಗಿಲಿನ ವಿನಾಯಕ ದೇವಸ್ಥಾನ, ಮಹಾರಾಜ ಸಂಸ್ಕೃತ ಕಾಲೇಜು ಆವರಣ, ಅಗ್ರಹಾರದ ದೇವೀರಮ್ಮಣ್ಣಿ ಗಣಪತಿ ದೇವಸ್ಥಾನ, ನೂರೊಂದು ದೇವಸ್ಥಾನ, ಆರ್‌ಎಂಸಿ ಬಳಿಯ ಪಂಚಮುಖಿ ದೇವಸ್ಥಾನ, ಕೆ.ಆರ್.ಪೊಲೀಸ್ ಠಾಣೆ ಪಕ್ಕದ ಗಣಪತಿ ದೇವಸ್ಥಾನ, ವಿನಾಯಕ ನಗರದ ಗಣಪತಿ ದೇವಸ್ಥಾನ ಸೇರಿದಂತೆ ಇನ್ನಿತರ ವಿನಾಯಕ ದೇವಸ್ಥಾನದಲ್ಲಿ ವಿಶೇಷ ತಯಾರಿ ಮಾಡಿಕೊಳ್ಳಲಾಗಿದೆ.