

ವಿಜಯವಾಣಿ ಸುದ್ದಿಜಾಲ ಉಡುಪಿ
ಸಂತರ ಜೀವನ ಹಾಗೂ ದೈವಭಕ್ತಿ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ಅವರ ಮಾರ್ಗ ಅನುಸರಿಸಿ ನಾವೂ ಸಹ ಪವಿತ್ರತೆಯ ಹಾದಿಯಲ್ಲಿ ಸಾಗಬೇಕು. ನಮ್ಮ ನಡೆ-ನುಡಿ ಮತ್ತು ವರ್ತನೆ ಸಂತರನ್ನೇ ಪ್ರತಿಬಿಂಬಿಸುವಂತಾಗಲಿ ಸಮಾಜ ಔನ್ಯತ್ಯ ಹೊಂದಲಿ ಎಂದು ಕಲ್ಯಾಣಪುರದ ಮಿಲಾಗ್ರಿಸ್ ಕಥೆಡ್ರಲ್ ಚರ್ಚ್ನ ಧರ್ಮಗುರು ಮೊನ್ಸಿನ್ಜರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಥೆಡ್ರಲ್ ಚರ್ಚ್ನಲ್ಲಿ ಆಯೋಜಿಸಿದ್ದ ಸಕಲ ಸಂತರ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಾಯಕ ಗುರು ರೆ.ಫಾ. ಪ್ರದಿಪ್ ಕಾಡೋರ್ಜ ಮಾತನಾಡಿ, ನಾವೆಲ್ಲರೂ ಸಹ ಸಂತರಂತಾಗಲು ಸಿದ್ಧರಾಗಬೇಕು. ಅದಕ್ಕಾಗಿ ನಮ್ಮ ಆಲೋಚನೆ, ಮಾತು ಮತ್ತು ಹೃದಯ ಶುದ್ಧವಾಗಿರಬೇಕು. ದೇವರ ಮಾರ್ಗದಲ್ಲಿ ನಡೆಯುವ ಪರಿಪೂರ್ಣ ಸಂತ ಜೀವನ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಧಾರ್ಮಿಕ ಕರ್ತವ್ಯ ಎಂದರು.
ಯುವಜನ ಆಯೋಗದ ಸದಸ್ಯೆ ರೇಚೆಲ್ ಲುವಿಸ್ ಕಾರ್ಯಕ್ರಮ ನಿರೂಪಿಸಿದರು. ಚರ್ಚ್ನ ಪಾಲನಾ ಸಮಿತಿಯ ಕಾರ್ಯದರ್ಶಿ ಎವ್ಜಿನ್ ರೆಬೆಲ್ಲೊ, ಆಯೋಗ ಸಂಯೋಜಕಿ ಪ್ರೇಮಾ ಲುವಿಸ್, ಸುವಾರ್ತಾ ಪ್ರಸಾರ ಆಯೋಗದ ಸಚೇತಕಿ ಜ್ಯೋತಿ ಲುವಿಸ್ ವಂದಿಸಿದರು. ಅನೇಕ ಪಾಲಕರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂತರ ಮಹೋತ್ಸವದ ನಿಮಿತ್ತ ಮಕ್ಕಳು ಹಾಗೂ ಯುವಜನರಿಗಾಗಿ ಸಂತರ ಅಲಂಕಾರ ಉಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಚರ್ಚ್ನ 28 ಮಕ್ಕಳು ಹಾಗೂ ಯುವಜನರು ಭಾಗವಹಿಸಿ ತಾವು ಆಯ್ದ ಸಂತರ ಜೀವನದ ಪ್ರೇರಣಾದಾಯಕ ಘಟನೆ ಮತ್ತು ಧಾರ್ಮಿಕ ಸಂದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸ್ಪರ್ಧಾಳುಗಳ ಸಾಂಸ್ಕೃತಿಕ ಪ್ರತಿಭೆಯು ಚರ್ಚ್ನಲ್ಲಿ ಭಕ್ತಿ-ಭಾವದ ವಾತಾವರಣ ನಿರ್ಮಿಸಿತು. ಸಂತರ ವಿಭಿನ್ನ ಜೀವನಶೈಲಿ, ಅವರ ದೈವಭಕ್ತಿ ಮತ್ತು ತ್ಯಾಗದ ಮನೋಭಾವ ಪ್ರತಿಬಿಂಬಿಸುವ ಉಡುಪು ಹಾಗೂ ಅಲಂಕಾರ ಮಾಡಿಕೊಂಡಿದ್ದ ಸ್ಪರ್ಧಾಳುಗಳನ್ನು ಗೌರವಿಸಲಾಯಿತು. ವಂ. ಗುರು ಸ್ಟೀವನ್ ಫರ್ನಾಂಡಿಸ್ ಮತ್ತು ವಂ. ಗುರು ಜೋಕಿಮ್ ಡಿಸೋಜ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.