ಶಿಕ್ಷಣದಿಂದಲೇ ಸರ್ವಾಂಗೀಣ ಪ್ರಗತಿ

NARAGUND
Published on

ನರಗುಂದ: ಸಮಾಜದಲ್ಲಿ ಮಾನವನು ಶಿಕ್ಷಣದಿಂದ ಮಾತ್ರ ಅತ್ಯುತ್ತಮವಾದ ಸಂಸ್ಕಾರ, ಉದ್ಯೋಗ, ಮೌಲ್ಯಯುತವಾದ ಜೀವನ ನಿರ್ಮಿಸಿಕೊಳ್ಳಬಹುದು ಎಂದು ತಾಪಂ ಇಒ ಎಸ್.ಕೆ. ಇನಾಮದಾರ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನರಗುಂದ ತಾಲೂಕು ಮಟ್ಟದ ದರ್ಶಿನಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿಕಲಚೇತನರಿಗೆ ದರ್ಶಿನಿ ಅರಿವು ಗ್ರಂಥಾಲಯಗಳ ಮೂಲಕ ಜ್ಞಾನಾರ್ಜನೆ ನೀಡಿದರೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.

ನರಗುಂದ ತಾಲೂಕಿನ 13 ಗ್ರಾಪಂ ವ್ಯಾಪ್ತಿಯಲ್ಲಿ 26 ಅರಿವು ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿಯೂ ಅಂಗವಿಕಲರಿಗೆ ಬೇಕಾದ ವಿವಿಧ ಸಾಧನ ಸಲಕರಣೆಗಳನ್ನು (ಬ್ರೈಲ್ ಕಿಟ್) ಸರ್ಕಾರದಿಂದ ನೀಡಲಾಗಿದೆ. ಅವುಗಳ ಬಳಕೆ ಮಾಡುವ ವಿಧಾನ, ಅರಿವು, ಕೇಂದ್ರದ ಮೇಲ್ವಿಚಾರಣೆ ಮಾಡುವ ಕುರಿತು ಆಯಾ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಆಯೋಜಿಸಲಾಗುತ್ತದೆ. ಈ ತರಬೇತಿ ಪಡೆದುಕೊಂಡ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಆಡಳಿತಾತ್ಮಕವಾಗಿ ಯೋಜನೆ ಜಾರಿಗೆ ತರಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಶಿವಾನಂದ ಹಾದಿಮನಿ, ಗ್ರಂಥಪಾಲಕಿ ಲಲಿತಾ ಮುಳ್ಳೂರ, ಸಂಪನ್ಮೂಲ ವ್ಯಕ್ತಿಗಳಾದ ಟಿ.ಪಿ. ಗುಡ್ಡಿಮಠ ಮಾತನಾಡಿದರು. ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ, ಕೃಷ್ಣಮ್ಮ ಹಾದಿಮನಿ, ತಾಪಂ ಸಹಾಯಕ ಲೆಕ್ಕಾಧಿಕಾರಿ ಪ್ರದೀಪ ಕದಂ, 13 ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net