ಕಾನೂನು ಸುವ್ಯವಸ್ಥೆ ಪಾಲನೆಯಿಂದ ಸರ್ವಾಂಗೀಣ ಪ್ರಗತಿ

SABHE
Published on

ರಟ್ಟಿಹಳ್ಳಿ: ಯಾವ ರಾಷ್ಟ್ರಗಳಲ್ಲಿ, ನಗರಗಳಲ್ಲಿ, ಪಟ್ಟಣಗಳಲ್ಲಿ ಮತ್ತು ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿ ಪಾಲನೆಯಾಗಿ ಶಾಂತಿ ಮತ್ತು ಸೌಹರ್ದತೆ ನೆಲೆಸಿರುತ್ತದೆಯೋ ಅಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಗಣೇಶೋತ್ಸವ ಮತ್ತು ಈದ್-ಮಿಲಾದ್ ಹಬ್ಬವನ್ನು ಹಿಂದು ಮತ್ತು ಮುಸ್ಲಿಮರು ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣವರ ಹೇಳಿದರು.

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ‘ಹಲವಾರು ವರ್ಷಗಳಿಂದ ರಟ್ಟಿಹಳ್ಳಿ ಪಟ್ಟಣದಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಎಲ್ಲ ಗಣೇಶ ಕಮಿಟಿಯ ಸ್ವಯಂ ಸೇವಕರು ಶಾಂತತೆಯನ್ನು ಕಾಪಾಡಿಕೊಂಡು ಕಾನೂನು ನಿಯಮಗಳನ್ನು ಪಾಲಿಸಿ ಹಬ್ಬ ಆಚರಿಸಬೇಕು. ಡಿಜೆ ಬಳಸಲು ನಿಷೇಧವಿರುವ ಕಾರಣ ಸಾಧ್ಯವಾದಷ್ಟು ಡಿಜೆ ಸಂಸ್ಕೃತಿಯನ್ನು ಬಿಟ್ಟು ಕಲಾ ತಂಡಗಳಿಗೆ ಅವಕಾಶ ನೀಡುವುದು ಉತ್ತಮ. ಗಣೇಶ ಮೂರ್ತಿ ವಿಸರ್ಜನೆಯನ್ನು ಸಾಧ್ಯವಾದಷ್ಟು ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ಹಬ್ಬಗಳು ಮನಸಿಗೆ ಶಾಂತಿ ನೆಮ್ಮದಿ ಮತ್ತು ಸಂತೋಷವನ್ನು ನೀಡಬೇಕು. ಸರ್ಕಾರದ ಮಾರ್ಗಸೂಚಿ ಅನ್ವಯ ಎಲ್ಲ ಗಣೇಶ ಮಂಡಳಿಯವರು ನಿಯಮ ಪಾಲನೆ ಮಾಡಬೇಕು ಎಂದರು. ಸಿಪಿಐ ಬಸವರಾಜ ಪಿ.ಎಸ್, ಪಿಎಸ್‌ಐ ರಮೇಶ ಪಿ.ಎಸ್ ಮಾತನಾಡಿ, ಗಣೇಶ ಹಬ್ವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಬಹುಮಾನ ಘೋಷಣೆ: ರಟ್ಟಿಹಳ್ಳಿ ತಾಲೂಕಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸುವ್ಯವಸ್ಥಿತವಾಗಿ ಕಾನೂನು ಪಾಲಿಸಿ ಶಾಂತಿಯುತವಾಗಿ ಗಣೇಶನ ಹಬ್ಬವನ್ನು ಆಚರಿಸುವ ಕಮಿಟಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ನೀಡಲಾಗುತ್ತದೆ ಎಂದು ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ ಹೇಳಿದರು.

ಪಿಎಸ್‌ಐ ಕೃಷ್ಣಪ್ಪ ತೋಪಿನ, ಅಗ್ನಿಶಾಮಕ ಠಾಣೆ ಅಧಿಕಾರಿ ಕೆ.ಎಂ. ಕಿಲ್ಲೇದಾರ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಾಲತೇಶಗೌಡ ಗಂಗೋಳ, ಪ್ರಕಾಶ ಮಲ್ಲನಗೌಡ್ರ, ಹನುಮಂತಪ್ಪ ಗಾಜೇರ, ಜಾಕೀರ ಮುಲ್ಲಾ, ಮಖಬುಲ್‌ಸಾಬ ಮುಲ್ಲಾ, ಅಬ್ಬಾಸ ಗೋಡಿಹಾಳ, ಮುಸ್ತಾಕಸಾಬ ಎಲಿವಾಳ, ಬಸವರಾಜ ಆಡಿನವರ, ಸುನೀಲ ಸರಶೆಟ್ಟರ್, ವೀರನಗೌಡ ಯಡಚಿ, ಆನಂದ ಪುಟ್ಟಪ್ಪಳವರ, ಮೃತ್ಯುಂಜಯ ಬೆಣ್ಣಿ, ಆಕಾಶಗೌಡ ಪಾಟೀಲ, ಸಿದ್ದಪ್ಪ ಹರಿಜನ, ರವಿ ಹದಡೇರ, ರಾಜು ನಾಯಕ, ಸುನೀಲ ನಾಯಕ, ಆದಿಲ್ ಖಾಜಿ, ಅಬ್ದುಲ್ ಸೈಕಲ್ಗಾರ, ರಾಜು ದ್ಯಾವಕ್ಕಳವರ ಕುಡುಪಲಿ, ಎಲಿವಾಳ, ಚಿಕ್ಕಕಬ್ಬಾರ, ಗಲಿಗಿನಕಟ್ಟಿ, ಮಕರಿ ಗ್ರಾಮದ ಗಣೇಶ ಮಂಡಳಿಯ ಪದಾಧಿಕಾರಿಗಳು ಇದ್ದರು. ಎ.ಎಸ್.ಐ ಅಶೋಕ ಕೊಂಡ್ಲಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net