

ಹುಬ್ಬಳ್ಳಿ : ನಮ್ಮವರ ರಕ್ಷಣೆ ಜತೆಗೆ ಸರ್ವಾಂಗೀಣ ಅಭಿವೃದ್ಧಿ ರಕ್ಷಾ ಬಂಧನದ ಉದ್ದೇಶವಾಗಬೇಕು. ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯ ಮುಂದುವರೆಸಿಕೊಂಡು ಹೋದಾಗ ಮಾತ್ರ ಕುಟುಂಬ ವ್ಯವಸ್ಥೆ ಸದೃಢಗೊಳ್ಳಲು ಸಾಧ್ಯ ಎಂದು ಸಂಸ್ಕಾರ ಭಾರತಿ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಅಭಿಜಿತ್ ಗೋಖಲೆ ಹೇಳಿದರು.
ಇಲ್ಲಿಯ ಇಂದಿರಾ ಗಾಜಿನ ಮನೆಯ ಉದ್ಯಾನವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ರಕ್ಷಾ ಬಂಧನ ಅಂಗವಾಗಿ ಸೋಮವಾರ ಆಯೋಜಿಸಿದ್ದ ರಕ್ಷಾ ಬಂಧನ ಉತ್ಸವ ಸಮಾರಂಭದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು.
ಸಣ್ಣ ಸಣ್ಣ ಕೆಲಸಗಳಿಂದಲೇ ದೊಡ್ಡ ಸಾಧನೆ ಮಾಡಲು ಆಗುತ್ತದೆ. ಮೊದಲು ನಮ್ಮ ಹಸ್ತಾಕ್ಷರವನ್ನು ಮಾತೃಭಾಷೆಯಲ್ಲಿಯೇ ಮಾಡಬೇಕು. ಇದು ನಮ್ಮಿಂದಲೇ ಆರಂಭಗೊಳ್ಳಬೇಕು. ದೇಶ ಸೇವೆ ಹಾಗೂ ರಕ್ಷಣೆಗೆ ದೃಢ ಸಂಕಲ್ಪ ಅಗತ್ಯ ಎಂದು ತಿಳಿಸಿದರು.
ಆರಂಭದಲ್ಲಿ ಧ್ವಜ ವಂದನೆ ಸಲ್ಲಿಸಲಾಯಿತು. ಸಭೆಯ ನಂತರ ಸಂಘದ ಕಾರ್ಯಕರ್ತರು ಪರಸ್ಪರ ರಾಖಿ ಕಟ್ಟಿಕೊಳ್ಳುವ ಮೂಲಕ ರಕ್ಷಾ ಬಂಧನದ ಶುಭಾಷಯಗಳನ್ನು ವಿನಿಮಯ ಮಾಡಿಕೊಂಡರು.
ಆಟೋ ಚಾಲಕ ಪ್ರಕಾಶ ಮಾಗುಂಡಪ್ಪ ಉಳ್ಳಾಗಡ್ಡಿ ಅತಿಥಿಯಾಗಿದ್ದರು. ಮಹಾನಗರ ಸಹ ಸಂಘಚಾಲಕ ಮಹಾದೇವ ದಿವಟೆ, ಶಾಸಕ ಮಹೇಶ ಟೆಂಗಿನಕಾಯಿ, ಸುಭಾಸಸಿಂಗ್ ಜಮಾದಾರ, ಸಂಘದ ಪ್ರಮುಖರು ಪಾಲ್ಗೊಂಡಿದ್ದರು.