

ವಿರಾಜಪೇಟೆ: ಗ್ರಂಥಾಲಯಗಳು ಜ್ಞಾನಾರ್ಜನೆಯ ಪ್ರಮುಖ ತಾಣವಾಗಿದ್ದು. ಸಮಾಜದ ಪ್ರಗತಿ ಹಾಗೂ ಓದುಗರ ಬೆಳವಣಿಗೆಯಲ್ಲಿ ಗ್ರಂಥಾಲಯ ಪ್ರಮುಖ ಮುಖ್ಯ ಪಾತ್ರ ವಹಿಸುತ್ತದೆ ಎಂದು ಇಲ್ಲಿನ ಕಾವೇರಿ ಕಾಲೇಜು ಪ್ರಾಂಶುಪಾಲ ಬೆನೆಡಿಕ್ಟ್ ಆರ್.ಸಲ್ದಾನ ಅಭಿಪ್ರಾಯಪಟ್ಟರು.
ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಆ.12ರಂದು ಗ್ರಂಥಪಾಲಕರ ದಿನ ಆಚರಿಸಲಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯ ಸೇವೆಯಿಂದ ಎಂಬುದನ್ನು ಅರಿಯಬೇಕು ಎಂದರು.
ಮನುಷ್ಯನ ಸರ್ವತೋಮುಖ ಬೆಳವಣಿಗೆ ಪುಸ್ತಕಗಳಿಂದ ಮಾತ್ರ ಸಾಧ್ಯ. ಆದ್ದರಿಂದ ಯುವ ಸಮೂಹ ಆದಷ್ಟು ಪುಸ್ತಕಗಳನ್ನು ಓದುವುದರ ಜತೆಗೆ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ದಿನದಲ್ಲಿ ಒಂದಷ್ಟು ಸಮಯವನ್ನು ವೃತ್ತ ಪತ್ರಿಕೆ ಹಾಗೂ ಪುಸ್ತಕವನ್ನು ಓದಲು ಮೀಸಲಿಡಬೇಕು ಎಂದು ಹೇಳಿದರು.
ಕಾಲೇಜಿನ ಗ್ರಂಥಪಾಲಕಿ ಡಾ.ಮುತ್ತಮ್ಮ ಮಾತನಾಡಿ, ಗ್ರಂಥಾಲಯ ವಿಜ್ಞಾನವನ್ನು ದೇಶಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಡಾ.ಎಸ್.ಆರ್.ರಂಗನಾಥನ್ ಮೊದಲಿಗರು. ಅವರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ಆದ್ದರಿಂದ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಆಧುನಿಕ ಶೈಲಿಯ ಗ್ರಂಥಾಲಯ ಕಾಣಲು ಮೂಲ ಕಾರಣ ಡಾ.ಎಸ್.ಆರ್.ರಂಗನಾಥನ್. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳೊಂದಿಗೆ ಕಳೆದರೆ ಮುಂದಿನ ಅವರ ಜೀವನ ಹೆಚ್ಚು ಜ್ಞಾನಮಯವಾಗಿರುತ್ತದೆ ಎಂದರು.
ಡಾ.ಎಸ್.ಆರ್.ರಂಗನಾಥನ್ ಅವರ ಜೀವನ ಮತ್ತು ಸಾಧನೆಯ ಕುರಿತು ಅಂತಿಯ ಬಿಎ ವಿದ್ಯಾರ್ಥಿನಿ ಎಂ.ಪಿ.ರಾಧಿಕಾ ವಿಚಾರ ಮಂಡಿಸಿದರು. ವಿದ್ಯಾರ್ಥಿಗಳಿಗೆ ಓದುವ ಹವ್ಯಾಸದ ಮೇಲೆ ಡಿಜಿಟಲ್ ಮಾಧ್ಯಮದ ಪ್ರಭಾವ ಎಂಬ ವಿಷಯ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಬಿ.ಎಸ್.ರಕ್ಷಿತಾ ಹಾಗೂ ಇಂಗ್ಲಿಷ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ದ್ವಿತೀಯ ಬಿ.ಎ.ವಿದ್ಯಾರ್ಥಿನಿ ಆದಿತ್ಯಾ ಅವರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯಾ ಮುದ್ದಪ್ಪ, ಉಪನ್ಯಾಸಕರಾದ ಡಾ.ವೀಣಾ, ಅಂಬಿಕಾ, ನಾಗರಾಜು, ನಿರ್ಮಿತಾ, ಸೋಮಣ್ಣ, ಅಕ್ಷಿತಾ ನಾಯ್ಕ್, ವನಿತಾ, ಮಾಣಿಕ್ಯ, ಸುನೀಲ್ ಇತರರಿದ್ದರು.