ಸಂಪರ್ಕ ರಸ್ತೆಗಳ ಬಂದ್

kundapur
Published on

ಕುಂದಾಪುರ: ವಾಹನ ಅನಾವಶ್ಯಕ ಸಂಚಾರಕ್ಕೆ ಕಡಿವಾಣ ಹಾಕಲು ಕುಂದಾಪುರ ಪೊಲೀಸರು ಪೇಟೆಯ ಪ್ರಮುಖ ಸಂಪರ್ಕ ಮಾರ್ಗಗಳನ್ನು ಬಂದ್ ಮಾಡಿದ್ದಾರೆ.

ಜಿಲ್ಲಾಡಳಿತವು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿಪಡಿಸಿದ ಅವಧಿಯಲ್ಲಿ ನಗರದಲ್ಲ್ಲೆಡೆ ವಾಹನ ದಟ್ಟಣೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸರು ಸಂಚಾರ ನಿರ್ಬಂಧಕ್ಕೆ ಮುಂದಾಗಿದ್ದಾರೆ.

ಪ್ರಮುಖ ರಸ್ತೆಗಳಾದ ಚಿಕ್ಕನ್‌ಸಾಲ್, ಚರ್ಚ್ ರಸ್ತೆ ಹಾಗೂ ಶಾಸ್ತ್ರಿ ವೃತ್ತ ಹೊರತುಪಡಿಸಿ ಉಳಿದೆಲ್ಲ ಒಳ ರಸ್ತೆಗಳನ್ನು ಸೋಮವಾರ ರಾತ್ರಿಯೇ ಬಂದ್ ಮಾಡಲಾಗಿತ್ತು. ಚೆಕ್‌ಪಾಯಿಂಟ್ ಹಾಕಿರುವ ಮೂರು ರಸ್ತೆಗಳ ಪ್ರವೇಶದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಮಂಗಳವಾರ ಬೆಳಗ್ಗೆಯಿಂದ ಪ್ರತಿಯೊಂದು ವಾಹನಗಳ ತಪಾಸಣೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆ ರಸ್ತೆಯುದ್ದಕ್ಕೂ ವಾಹನಗಳ ಸಾಲು ಕಂಡುಬಂತು.

ಎಟಿಎಂ, ಮೆಡಿಕಲ್ ಹಾಗೂ ದಿನಸಿ ವಸ್ತುಗಳ ಖರೀದಿಗಾಗಿ ಒಂದಕ್ಕಿಂತ ಹೆಚ್ಚು ಮಂದಿ ಬಂದಿದ್ದರೆ ಅಂತವರನ್ನೆಲ್ಲಾ ತಡೆದ ಪೊಲೀಸ್ ಸಿಬ್ಬಂದಿ ಮನೆಗೆ ವಾಪಾಸ್ ಕಳುಹಿಸಿದರು. ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿಪಡಿಸಿರುವ ಅವಧಿಯಲ್ಲಿ ದಿನಸಿ ಹಾಗೂ ತರಕಾರಿ ಖರೀದಿಗಾಗಿ ಬೈಕ್‌ನಲ್ಲಿ ಬಂದ ಕೆಲ ಜನರನ್ನು ತಡೆದು ವಾಪಾಸ್ ಕಳುಹಿಸಿದ ಪ್ರಸಂಗವೂ ನಡೆಯಿತು.

ಶಾಸ್ತ್ರೀ ಸರ್ಕಲ್‌ನಲ್ಲಿ ವಾಹನ ದಟ್ಟಣೆ: ಪೊಲೀಸ್ ಚೆಕ್‌ಪಾಯಿಂಟ್ ಇರುವ ಶಾಸ್ತ್ರಿ ವೃತ್ತದಲ್ಲಿ ಪಿಎಸ್‌ಐ ಹರೀಶ್ ಆರ್ ನಾಯ್ಕ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆಯಲ್ಲಿ ತೊಡಗಿಕೊಂಡಿದ್ದ ವೇಳೆ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಈಗಾಗಲೇ ನಗರದ ಎರಡು ರಸ್ತೆಗಳಲ್ಲಿ ಒಂದು ರಸ್ತೆಯಲ್ಲಿ ಮಾತ್ರ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದು, ಒಂದೇ ರಸ್ತೆಯಲ್ಲಿ ತಪಾಸಣೆ ಮಾಡಿದ್ದರಿಂದ ಹೋಗುವ ಮತ್ತು ಬರುವ ವಾಹನಗಳ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ತಪಾಸಣೆ ಪ್ರಕ್ರಿಯೆ ಚುರುಕುಗೊಳಿಸಿದ ಬಳಿಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶವಾಯಿತು.

ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 1-2 ದಿನಗಳ ಕಾಲ ಈ ವ್ಯವಸ್ಥೆಯನ್ನು ಗಮನಿಸಿ, ಸಿಬ್ಬಂದಿಯಿಂದ ಅಭಿಪ್ರಾಯ ಪಡೆದು ಬಳಿಕ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದಾದರೆ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಹರಿರಾಮ್ ಶಂಕರ್ ಎಎಸ್‌ಪಿ ಕುಂದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net