

ಮದ್ದೂರು: ಹಲವು ಕಾರಣಗಳಿಂದ ವಿಭಜನೆಯಾಗಿದ್ದ ರೈತ ಸಂಘವನ್ನು ಒಟ್ಟುಗೂಡಿಸುವ ಕೆಲಸ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಬಣಗಳನ್ನು ಒಗ್ಗೂಡಿಸಿ ಐಕ್ಯತಾ ಹೋರಾಟವನ್ನು ರೂಪಿಸಲಾಗುವುದು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಪೂರ್ಣ ಪ್ರಮಾಣದ ತಾಲೂಕು ಸಮಿತಿ ಸಭೆ ಹಾಗೂ ಐಕ್ಯತಾ ಸಭೆಯಲ್ಲಿ ಅವರು ಮಾತನಾಡಿದರು. ನಾನಾ ಕಾರಣಗಳಿಂದ ರೈತ ಸಂಘವು ಒಡೆದು ಹೋಳಾಗಿ ಹಂಚಿಹೋಗಿತ್ತು. ಆದರೆ, ಎಲ್ಲ ರೈತ ಮುಖಂಡರು ಒಂದೇ ತತ್ವ, ಸಿದ್ಧಾಂತದಡಿ ರೈತರ ಹಾಗೂ ಸಾರ್ವಜನಿಕರು ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಆದ್ದರಿಂದ, ಎಲ್ಲರೂ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ರೈತ ಸಂಘಗಳ ಬಣಗಳು ಒಂದಾಗಿ ಮುನ್ನಡೆಯಬೇಕಾದ ಅವಶ್ಯಕತೆ ಇದೆ ಎಂದರು.
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಅವರ ಆಶಯ ಮತ್ತು ಕನಸುಗಳು ಈಡೇರಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗುವುದು ಅನಿವಾರ್ಯ. ರೈತ ಚಳವಳಿಗೆ ತನ್ನದೆ ಆದ ಇತಿಹಾಸವಿದೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಅವರ ಬಣವು ಮುಂದಿನ ದಿನಗಳಲ್ಲಿ ರೈತ ಸಂಘದ ಜತೆಗೂಡಿ ಒಟ್ಟುಗೂಡಿ ಹೋರಾಟ ಮಾಡುವುದಾಗಿ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸಮ್ಮುಖದಲ್ಲಿ ರೈತ ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ರೈತ ಸಂಘದ ಉಪಾಧ್ಯಕ್ಷ ರಾಜೇಗೌಡ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಕೆ.ಆರ್.ಪೇಟೆ ಜಯರಾಮು, ಕೆನ್ನಾಳು ನಾಗರಾಜು, ಜಿ.ಎ.ಶಂಕರ್, ಲಿಂಗಪ್ಪಾಜಿ, ಜವರೇಗೌಡ, ರಾಮಲಿಂಗಯ್ಯ, ರೇವಣ್ಣ, ವಿನೋದ್ ಬಾಬು, ಗೊಲ್ಲರದೊಡ್ಡಿ ಅಶೋಕ, ವರದರಾಜು, ಶೆಟ್ಟಹಳ್ಳಿ ರವಿಕುಮಾರ್, ಶಿವರಾಮು, ವಕೀಲ ಜಿ.ಎಸ್. ಸತ್ಯ, ವಳಗೆರಹಳ್ಳಿ ಅಲೋಕ, ಶಿವಕುಮಾರ್, ಶಶಿ, ಶ್ರೀನಿವಾಸ್, ಆಬಲವಾಡಿ ಪುಟ್ಟಸ್ವಾಮಿ, ಕೃಷ್ಣ, ಮಾಯಿಗಣ್ಣ, ಹೊಸಹಳ್ಳಿ ರವಿ, ವೈ.ಮಂಜು ಇತರರಿದ್ದರು.