ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ

New Varur New
Published on

ಹುಬ್ಬಳ್ಳಿ : ಭಾರತ ಶಕ್ತಿಯುತವಾಗಬೇಕು. ಮೊದಲು ದೇಶ. ದೇಶ ಇದ್ದರೆ ನಾವೆಲ್ಲ ಇರುತ್ತೇವೆ, ಧರ್ಮಗಳೂ ಇರುತ್ತವೆ ಎಂದು ರಾಷ್ಟ್ರಸಂತ, ಯುವಾಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರು ಹೇಳಿದರು.

ವರೂರಿನ ನವಗ್ರಹ ತೀರ್ಥಕ್ಷೇತ್ರದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಶನಿವಾರ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜೈನ ಧರ್ಮವು ಭಾರತದ ಪುರಾತನ ಧರ್ಮ. ಎಲ್ಲ ಧರ್ಮಗಳ ಸಹಕಾರದಿಂದ ಜೈನ ಧರ್ಮ ಬೆಳೆದಿದೆ ಎಂದರು.

ಜ. 26ರಂದು ತೀರ್ಥಂಕರರಿಗೆ ತಿರಂಗಾ ಎಂದರೆ, ತ್ರಿವರ್ಣಗಳ ಅಭಿಷೇಕ ಜರುಗಲಿದೆ. ಇದು ದೇಶದ ಯಾವ ಪ್ರದೇಶದಲ್ಲಿಯೂ ನಡೆದಿಲ್ಲ. ಮೊದಲ ಬಾರಿ ವರೂರಿನಲ್ಲಿ ನಡೆಯಲಿದೆ. ಅಂದು ಕೊನೆಯ ಮಹಾಮಸ್ತಕಾಭಿಷೇಕ ಹಾಗೂ ಹೋಮ ಹವನಗಳು ಜರುಗಲಿವೆ ಎಂದು ತಿಳಿಸಿದರು.

ಮುಕ್ತಿ ಮಂದಿರದ ಜಗದ್ಗುರು ಡಾ. ಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಧಾಮಿರ್ಕ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಆ ಮೂಲಕ ಈ ಪ್ರದೇಶದ ಜನರ ಬದುಕಿನಲ್ಲಿ ಪರಿವರ್ತನೆ ತಂದಿದ್ದಾರೆ. ದಕ್ಷಿಣ ಭಾರತದಲ್ಲಿ ಜರುಗಿದ ಮಹಾ ಧಾಮಿರ್ಕ ಕಾರ್ಯಕ್ರಮ ಇದು ಎಂದು ಬಣ್ಣಿಸಿದರು.

ಅಣ್ಣಿಗೇರಿ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ನವಗ್ರಹ ಕ್ಷೇತ್ರ ದರ್ಶನ ಮಾಡುವವರು ಮೋಕ್ಷ ಪಡೆಯುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಇಂಥ ಕಾರ್ಯಕ್ರಮದ ಮೂಲಕ ಭಕ್ತರಲ್ಲಿ ದೇವರ ಕುರಿತು ಪ್ರೇಮ, ಭಕ್ತಿ ಬೆಳೆಸಿ ಅವರನ್ನು ಭವಸಾಗರದಿಂದ ದಾಟಿಸುವ ಅಪರೂಪದ ಸಂತ ಎಂದು ಹೇಳಿದರು.

ಕೇವಲ ಧಾಮಿರ್ಕ ಕಾರ್ಯವಲ್ಲದೇ ಎಲ್ಲ ಧರ್ಮದ ಮಕ್ಕಳಿಗೂ ಪ್ರವೇಶ ನೀಡಿ, ಉಚಿತ ಶಿಕ್ಷಣ, ಊಟ, ವಸತಿ ನೀಡಿರುವ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಭಾವೈಕ್ಯತೆ ಮೆರೆದಿದ್ದಾರೆ ಎಂದು ಪೀರ್​ ಈ ತರೀಕ್​ ಅಲ್ಲಮ ಸೈಯದ್​ ಷಾ ಮಹಮ್ಮದ್​ ತಾಜುದ್ದೀನ್​ ಖಾದ್ರಿ ಹೇಳಿದರು.

ನಾಗಲಾಪುರ ನಾಗಲಿಂಗೇಶ್ವರಮಠದ ಶ್ರೀ ಚನ್ನಋಷಭೇಂದ್ರ ಸ್ವಾಮೀಜಿ, ಶಿರೋಳದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಳ್ಳ ಪಂಚಗ್ರಹ ಹಿರೇಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಬ್ಯಾಹಟ್ಟಿ ಹಿರೇಮಠದ ಶ್ರೀ ಮರುಳುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗುರುದೇವ ಆಚಾರ್ಯ ಶ್ರೀ ಕುಂಥುಸಾಗರ ಮಹಾರಾಜರು, ಮುನಿ ಪ್ರಸಂಗ

ಸಾಗರ ಅವರಿಗೆ ಏಲಾಚಾರ್ಯ ನಾಮಧೇಯ ಪ್ರದಾನ ಮಾಡಿದರು. ಸೌಧರ್ಮ ಇಂದ್ರ, ಇಂದ್ರಾಣಿಯರು ವಿಧಿ, ವಿಧಾನ ಪೂರೈಸಿದರು.

ದಾನಿಗಳಾದ ಕಾಂಗ್ರೆಸ್​ ಮುಖಂಡ ವಿಜಯಗೌಡ ಪಾಟೀಲ, ಆನಂದ ಪಾಟೀಲ, ಅಭಿನಂದನ ಅವರಾದಿ, ಪದ್ಮರಾಜ ಗೌಸೂರು, ಸುನೀಲ ಅರಗುಪ್ಪಿ, ಸ್ಮೀತಾ ಬಾಗಿ, ನಾಗಪ್ಪ ಅಷ್ಟಗಿ, ತವನಪ್ಪ ಅಷ್ಟಗಿ, ಶೀತಲ, ಆಕಾಶ, ಸುನೀಲ, ಅಭಿಷೇಕ ಜೈನ್​ ಹಾಗೂ ಮತ್ತಿತರರನ್ನು ಸನ್ಮಾನಿಸಲಾಯಿತು.

ಸುರೇಂದ್ರ ಹೆಗ್ಗಡೆ, ವಿಮಲ ತಾಳಿಕೋಟಿ, ಮಹೇಂದ್ರ ಸಿಂಘಿ ಹಾಗೂ ಮತ್ತಿತರರು ಇದ್ದರು.

ಜಂಬೂ ದ್ವೀಪ ಪೂಜೆ : ಸುಮೇರು ಪರ್ವತ ಸ್ಥಾಪನೆ ಅಂಗವಾಗಿ ವರೂರು ಜೈನ ತೀರ್ಥದಲ್ಲಿ ಶನಿವಾರ ಬೆಳಗ್ಗೆ ಜಂಬೂ ದ್ವೀಪದ ಪೂಜಾ ವಿಧಾನಗಳು ಶ್ಲೋಕ, ಮಂತ್ರಪಠಣ, ಹಾಡು ಸಂಗೀತಗಳೊಂದಿಗೆ ನೆರವೇರಿತು.

ದ್ವೀಪದ ಪ್ರತಿಯೊಂದು ದಿಕ್ಕಿನ ಪರ್ವತಗಳು, ನದಿಗಳು, ಸರೋವರಗಳು, ತೀರ್ಥಕ್ಷೇತ್ರಗಳು, ಮಂದಿರಗಳು ಮೊದಲಾದವುಗಳಿಗೆ ಅರ್ಘ್ಯ ಪ್ರದಾನ ಮಾಡಲಾಯಿತು.

ನಂತರ ಕ್ಷೇತ್ರದಲ್ಲಿರುವ ಒಂಬತ್ತು ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಅದ್ದೂರಿಯಿಂದ ನೆರವೇರಿತು. ಶುದ್ಧಜಲ, ಹಳದಿ, ಕುಂಕುಮ, ಗಂಧ, ಚಂದನ, ಅಷ್ಟಗಂಧ, ಕಬ್ಬಿನ ರಸ, ಸಮುದ್ರದ ನೀರು, ಗಿಡಮೂಲಿಕೆಗಳ ನೀರು, ಆಯುರ್ವೇದ ಔಷಧಿಯುಕ್ತ ನೀರು ಮತ್ತಿತರ ಪದಾರ್ಥಗಳಿಂದ ಮಸ್ತಕಾಭಿಷೇಕ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net